ವಿಜಯವಾಣಿ ಸುದ್ದಿಜಾಲ ಕೋಲಾರ
ವೈದ್ಯಕೀಯ ತುರ್ತು ಪರಿಸ್ಥಿತಿಗಳ ನಿರ್ವಹಣೆಗೆ ಅಗತ್ಯವಾದ ಪ್ರಥಮ ಚಿಕಿತ್ಸೆ ಜೀವ ಉಳಿಸುವ ಅತ್ಯಂತ ಪವಿತ್ರ ಕೆಲಸವಾಗಿದ್ದು, ಆಕಸ್ಮಿಕವಾಗಿ ಸಂಭವಿಸುವ ಅಪಘಾತದಿಂದ ಸಂಭವಿಸುವ ಸಾವು-ನೋವುಗಳ ಸಂಖ್ಯೆಯನ್ನು ಪ್ರಥಮ ಚಿಕಿತ್ಸೆಯ ಮೂಲಕ ತಗ್ಗಿಸಬಹುದು ಎಂದು ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ. ಎನ್.ಗೋಪಾಲಕೃಷ್ಣಗೌಡ ತಿಳಿಸಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಪ್ರಥಮ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿ ಅವರು ಮಾತನಾಡಿದರು.
ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸುವ ಬಗ್ಗೆ ವೈದ್ಯರಿಂದ ಜನಸಾಮಾನ್ಯರು ತಿಳಿದುಕೊಳ್ಳವುದು ಅವಶ್ಯವಾಗಿದೆ. ವೈದ್ಯರು ಸಹ ರೋಗಿಗಳಿಗೆ ರಕ್ತಸ್ರಾವ ತಡೆ, ಹಾವು ಕಡಿತ, ದ್ರವಾಂಶದ ಕೊರತೆ, ಪ್ರಜ್ಞೆಹೀನ ಸ್ಥಿತಿ, ಹೃದಯಾಘಾತ, ಸುಟ್ಟ ಗಾಯಗಳಂತಹ ಪ್ರಾಥಮಿಕ ಚಿಕಿತ್ಸೆಯ ಆರೋಗ್ಯ ತುರ್ತು ಬಗ್ಗೆ ಮಾಹಿತಿ ಕೊಡಬೇಕು ಎಂದರು.
ಸAಸ್ಥೆಯ ಜಿಲ್ಲಾ ಉಪಸಭಾಪತಿ ಆರ್.ಶ್ರೀನಿವಾಸನ್ ಮಾತನಾಡಿ, ಆಸ್ಪತ್ರೆ ವತಿಯಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ವೈದ್ಯಕೀಯ ತುರ್ತು ಪರಿಸ್ಥಿತಿ ನಿಭಾಯಿಸುವ ಕೌಶಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ, ಶಾಲೆ, ನಿಮ್ಮ ಮನೆ, ಗ್ರಾಮದಲ್ಲಿ ಇಂತಹ ತುರ್ತು ಪರಿಸ್ಥಿತಿ ಎದುರಾದಲ್ಲಿ ನೀವು ಅವರ ಜೀವ ಉಳಿಸುವ ಕೆಲಸ ಮಾಡಬಹುದು ಎಂದರು.
ಸAಸ್ಥೆಯ ರಾಜ್ಯ ಸಮಿತಿ ಸದಸ್ಯ ಜಿ.ಶ್ರೀನಿವಾಸ್ ಮಾತನಾಡಿ, ರೆಡ್‌ಕ್ರಾಸ್‌ಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದು, ಪ್ರತಿ ಪ್ರೌಢ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಸ್ಥಾಪನೆಗೆ ಕ್ರಮವಹಿಸಲಾಗಿದ್ದು, ಮುಂದಿನ ವಾರ ಜಿಲ್ಲಾಧಿಕಾರಿಗಳೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸAಸ್ಥೆ ಪ್ರಧಾನ ಕಾರ್ಯದರ್ಶಿ ನಂದೀಶ್ ಕುಮಾರ್ ಮಾತನಾಡಿ, ಅಗ್ನಿ ಆಕಸ್ಮಿಕ ಹೃದಯಾಘಾತ, ವಿದ್ಯುತ್ ಅವಘಢ ಮತ್ತಿತರ ಸಂದರ್ಭದಲ್ಲಿ ವಹಿಸಬೇಕಾದ ಮುನ್ನಚ್ಚರಿಕೆ, ಜೀವ ಉಳಿಸಲು ಮಾಡಬೇಕಾದ ಪ್ರಥಮ ಚಿಕಿತ್ಸೆ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು. ಮಲೇರಿಯಾ, ಡೆಂಗ್ಯು ಮತ್ತಿತರ ಸಾಂಕ್ರಾಮಿಕ ರೋಗಗಳ ತಡೆಗೆ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಶಿಕ್ಷಕಿ ಸಿದ್ದೇಶ್ವರಿ ವಹಿಸಿದ್ದು, ರೆಡ್‌ಕ್ರಾಸ್ ಕಾರ್ಯಕಾರಿ ಸದಸ್ಯ ಸೀನಪ್ಪ, ನಿಕಟಪೂರ್ವ ಸದಸ್ಯ ವೆಂಕಟಕೃಷ್ಣ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಸುಗುಣಾ, ಫರೀದಾ, ಶ್ವೇತಾ, ರಮಾದೇವಿ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಮತ್ತಿತರರಿದ್ದರು.
ಚಿತ್ರ ೧೨. ಕೆ.ಎಲ್.ಆರ್. ೦೪ : ಕೋಲಾರ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಶಾಲೆಯಲ್ಲಿ ವಿಶ್ವಪ್ರಥಮ ಚಿಕಿತ್ಸಾ ದಿನಾಚರಣೆ ಹಮ್ಮಿಕೊಂಡಿದ್ದು, ಡಾ. ಎನ್.ಗೋಪಾಲಕೃಷ್ಣಗೌಡ ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಮಾಸ್ಕ್ ವಿತರಿಸಿದರು.