ವಿವಿಧತೆಯಲ್ಲಿ ಏಕತೆ ಪರಿಕಲ್ಪನೆಗೆ ಬಲ: ರಾಜ್ಯಪಾಲ ಗೆಹಲೋತ್ | Characteristics of Indian culture

Governor program
Published on

ಬೆಂಗಳೂರು: ಭಾರತದ ಪ್ರತಿಯೊಂದು ರಾಜ್ಯವು ಅದರ ಗುಣಲಕ್ಷಣಗಳು, ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯಿಂದಾಗಿ ವಿಶಿಷ್ಟವಾಗಿವೆ. ಈ ಗುಣಲಕ್ಷಣಗಳು ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಗುಣಗಾನ ಮಾಡಿದರು.

ರಾಜಭವನದ ಗಾಜಿನ ಮನೆಯಲ್ಲಿ ಭಾನುವಾರ ಆಯೋಜಿಸಿದ್ದ ‘ರಾಜಸ್ಥಾನ ರಾಜ್ಯದ ಸಂಸ್ಥಾಪನಾ ದಿನ’ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಏಕಭಾರತ ಅತ್ಯುತ್ತಮ ಭಾರತ ಚಿಂತನೆ ಮೇರೆಗೆ ಪ್ರತಿರಾಜ್ಯಗಳ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳು, ಆಚರಣೆಗಳ ಪರಿಕಲ್ಪನೆ ಹಾಗೂ ಉದ್ದೇಶಗಳಲ್ಲಿ ಸಮಾನತೆ ಮತ್ತು ಸಾಮರಸ್ಯ ಗೋಚರಿಸುತ್ತದೆ. ದೇಶದ ಅನನ್ಯ ಅಸ್ಮಿತೆ, ವಿವಿಧತೆಯಲ್ಲಿ ಏಕತೆ ಪರಿಕಲ್ಪನೆಯನ್ನು ಬಲಪಡಿಸುತ್ತದೆ ಎಂದು ಗೆಹಲೋತ್ ಹೇಳಿದರು.

ಎಲ್ಲರ ಜವಾಬ್ದಾರಿ

ದೇಶದ ಅಭಿವೃದ್ಧಿಗೆ ಎಲ್ಲ ರಾಜ್ಯಗಳು ಪ್ರಮುಖ ಕೊಡುಗೆಯನ್ನು ಹೊಂದಿವೆ. 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯ ಬದ್ಧರಾಗುವುದು, ಕೊಡುಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ರಾಜಸ್ಥಾನದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್‌ಉ ಬಿಂಬಿಸುವ ವಿವಿಧ ವರ್ಣರಂಜಿತ, ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗಿದೆ. ಅದ್ಭುತವಾದ ಪ್ರಸ್ತುತಿ ನೀಡಿದ ಎಲ್ಲ ಕಲಾವಿದರಿಗೆ ಅಭಿನಂದನೆ ತಿಳಿಸಿದ ರಾಜ್ಯಪಾಲ ಗೆಹಲೋತ್, ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ, ಸಹಕಾರ ನೀಡಿವೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯ, ಐಪಿಎಸ್ ಅಧಿಕಾರಿ ಲಭುರಾಮ್, ಮುಖಂಡ ಪ್ರಕಾಶ್ ಮಂಡೋತ್, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಮೇಘರಿಕ್, ಭಾಸ್ಕರರಾವ್, ರಾಜಸ್ಥಾನ ಸೇವಿಕಾ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net