ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರು ದುಡಿಮೆಗೆ ತಕ್ಕ ಸಂಬಳವಿಲ್ಲ / ಸರ್ಕಾರ ನಿಗಧಿಪಡಿಸಿರುವ ಕನಿಷ್ಟ ವೇತನಕ್ಕಿಂತ ಕಡಿಮೆ ಸಂಬಳ ನೀಡುತ್ತಿರುವ ಏಜೆನ್ಸಿಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲಾಧಿಕಾರಿಗಳ ಕಛೇರಿಯಿಂದ ಹಿಡಿದು ಪೌರ ಕಾರ್ಮಿಕರ ತನಕ ವಿವಿಧ ಸರ್ಕಾರಿ ಕಛೇರಿಗಳಲ್ಲಿ ಬಹುತೇಕ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನಕ್ಕಿಂತ ಕಡಿಮೆ ವೇತನ ನೀಡಿ ದುಡಿಸಿಕೊಳ್ಳುತ್ತಿದ್ದಾರೆ. ದುಡಿಮೆ ತಕ್ಕಂತೆ ಸಂಬಳವೂ ಇಲ್ಲ ಸೌಲಭ್ಯಗಳು ಇಲ್ಲದೆ ಅನೇಕ ವರ್ಷಗಳಿಂದ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ.

ಸರ್ಕಾರ ಸರ್ಕಾರಿ ಕಛೇರಿಗಳಲ್ಲಿ ನೌಕರರಿಗೆ ಸೇವಾ ಭದ್ರತೆ ಮತ್ತು ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕೆಂಬ ಉದ್ದೇಶದಿಂದ ಬಹುತೇಕ ನೌಕರರ ನೇಮಕಾತಿಗೆ ಗುತ್ತಿಗೆ ನೀಡಲಾಗುತ್ತಿದೆ. ಆ ನೌಕರರನ್ನು ನೇಮಕ ಮಾಡುವ ಗುತ್ತಿಗೆದಾರರು ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಟ ವೇತನಕ್ಕಿಂತ ಪ್ರತಿ ತಿಂಗಳು ಒಬೊಬ್ಬ ಗುತ್ತಿಗೆದಾರ ಒಂದೊAದು ರೀತಿಯಲ್ಲಿ ನೌಕರರಿಗೆ ಹಣ ನೀಡುತ್ತಿದ್ದಾನೆ.

ಸರ್ಕಾರ ನಿಗಧಿಪಡಿಸಿರುವ ೧೮ ಸಾವಿರ ಕನಿಷ್ಟ ವೇತನ ಯಾವ ಗುತ್ತಿಗೆದಾರನು ನೌಕರರಿಗೆ ನೀಡುತ್ತಿಲ್ಲ. ೧೨ ಸಾವಿರದಿಂದ ೧೮ ಸಾವಿರದ ತನಕ ಒಬ್ಬೊಬ್ಬ ಗುತ್ತಿಗೆದಾರ ಒಂದೊAದು ರೀತಿಯಲ್ಲಿ ನೌಕರರಿಗೆ ಸಂಬಳ ನೀಡುತ್ತಿದ್ದಾರೆ. ಇದನ್ನು ಪ್ರಶ್ನೆಸಲು ಯಾವ ನೌಕರರೂ ಮುಂದಾಗುತ್ತಿಲ್ಲ. ಕಾರ್ಮಿಕ ಇಲಾಖೆಗೆ ದೂರು ನೀಡಿ ಪ್ರಶ್ನಿಸಬಹುದು. ಆದರೆ ಆ ಗುತ್ತಿಗೆದಾರ ಯಾವ ಸಂದರ್ಭದಲ್ಲಿ ಕೆಲಸದಿಂದ ತೆಗೆದುಹಾಕುತ್ತಾರೆಂಬ ಭಯದಿಂದ ಕೊಟ್ಟಿದ್ದನ್ನು ತೆಗೆದುಕೊಂಡು ಹೋಗುವಂತಹ ಪರಿಸ್ಥಿತಿಯು ಉಂಟಾಗಿದೆ.

ಗುತ್ತಿಗೆದಾರರು ಪ್ರತಿ ವರ್ಷ ನೌಕರರನ್ನು ಮರು ನೇಮಕಾತಿ ಮಾಡುವುದಲ್ಲದೆ, ವರ್ಷಕ್ಕೊಮ್ಮೆ ಮರು ನೇಮಕ ಮಾಡಿಕೊಳ್ಳುವಾಗ ಒಂದು ತಿಂಗಳಷ್ಟು ಹಣವನ್ನು ಗುತ್ತಿಗೆದಾರನಿಗೆ ನೀಡಬೇಕಾಗುತ್ತದೆ ಎಂಬ ಕಡ್ಡಾಯವನ್ನು ಹಾಕುತ್ತಿದ್ದಾನೆ. ಪ್ರತಿ ತಿಂಗಳು ಸರ್ಕಾರ ನೀಡುವ ಕನಿಷ್ಟ ವೇತನದಲ್ಲಿ ಕಡಿಮೆ ಕೊಡುವುದಲ್ಲದೆ ವರ್ಷ ಮುಗಿದ ನಂತರ ಮರು ನೇಮಕ ಸಂದರ್ಭದಲ್ಲಿ ಒಂದು ತಿಂಗಳ ವೇತನದ ಹಣವನ್ನು ನೀಡಬೇಕಾಗುತ್ತದೆ ಎಂದು ಹೆಸರು ಹೇಳದ ನೌಕರರೊಬ್ಬರು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಇನ್ನು ಸರ್ಕಾರಿ ಕಛೇರಿಗಳಲ್ಲಿ ಸರ್ಕಾರಿ ನೌಕರರು ದುಡಿಯುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊರಗುತ್ತಿಗೆ ನೌಕರರಿಂದ ದುಡಿಸಿಕೊಳ್ಳಲಾಗುತ್ತದೆ. ಆದರೆ ಇದ್ಯಾವುದನ್ನೂ ಪ್ರಶ್ನಿಸುವಂತಿಲ್ಲ. ಒಂದು ವೇಳೆ ಹೊರಗುತ್ತಿಗೆ ನೌಕರರು ಅವರಿಗೆ ಆಗುತ್ತಿರುವ ಅನ್ಯಾಯದ ವಿರುದ್ದ ಪ್ರಶ್ನೆ ಮಾಡಿದರೆ ಅವರನ್ನು ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಹಾಕಲಾಗುತ್ತದೆ. ಆದ್ದರಿಂದ ಜೀವನೋಪಾಯಕ್ಕಾಗಿ ಯಾವುದೇ ರೀತಿಯ ತೊಂದರೆ ನೀಡಿದರೂ ವಿಧಿಯಿಲ್ಲದೆ ಅನುಭವಿಸಿಕೊಂಡು ದುಡಿಯಬೇಕಾದ ಪರಿಸ್ಥಿತಿಯು ಇದೆ ಎಂಬುದು ಹೊರ ಗುತ್ತಿಗೆ ನೌಕರರ ಮಾತಾಗಿದೆ.

ಕೋಟ್

ಸರ್ಕಾರ ನೌಕರರನ್ನು ನೇಮಕ ಮಾಡಿಕೊಂಡರೆ ಪಿಂಚಣಿ ಸೇರಿದಂತೆ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ ಎಂದು ಹೊರ ಗುತ್ತಿಗೆ ನೌಕರರನ್ನು ಸರ್ಕಾರಿ ಕಛೇರಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಿಕೊಂಡಿದ್ದಾರೆ. ಹೊರಗುತ್ತಿಗೆ ನೇಮಕಾತಿ ಸಂಘ ಸಂಸ್ಥೆಗಳ ಮೂಲಕ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಸರ್ಕಾರ ಕನಿಷ್ಟ ವೇತನ ೧೮ ಸಾವಿರ ನಿಗಧಿಪಡಿಸಿದೆ. ಆದರೆ ಗುತ್ತಿಗೆದಾರರು ನೀಡುತ್ತಿರುವುದು ಬಹುತೇಕ ಎಲ್ಲಾ ಕಡೆಗಳಲ್ಲಿ ೧೫ ಸಾವಿರ ಒಳಗಡೆ ಇದೆ. ಇದರಲ್ಲಿ ಸರ್ಕಾರದ ಅಧಿಕಾರಿಗಳಿಂದ ಹಿಡಿದು ಹೊರ ಗುತ್ತಿಗೆ ಏಜೆನ್ಸಿಗಳ ತನಕ ಕಮೀಷನ್ ದಂಧೆ ಇರುವುದರಿಂದ ಹೊರ ಗುತ್ತಿಗೆ ನೌಕರರ ಸಂಬಳವನ್ನು ಕಡಿತಗೊಳಿಸಿ ದುಡಿಮೆ ತಕ್ಕ ರೀತಿಯಲ್ಲಿ ಹಣ ನೀಡುತ್ತಿಲ್ಲ. ಇದರ ತಪ್ಪು ಸರ್ಕಾರದ್ದೇ ಆಗಿದೆ. ಖಾಯಂ ನೌಕರರನ್ನು ನೇಮಕ ಮಾಡಿಕೊಳ್ಳದೆ ಕಮೀಷನ್ ದಂಧೆಗಾಗಿ ಹೊರಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿರುವುದು ನಿಲ್ಲಬೇಕು.

-ಪಿ.ಆರ್. ಸೂರ್ಯನಾರಾಯಣ, ಸಿ.ಪಿ.ಐ.ಎಂ. ಮುಖಂಡ.

ಕೋಟ್

ಸರ್ಕಾರ ನಿಗಧಿಪಡಿಸಿರುವ ಕನಿಷ್ಟ ವೇತನಕ್ಕಿಂತ ಕಡಿಮೆ ನೀಡುತ್ತಿರುವಂತಹ ಹೊರಗುತ್ತಿಗೆ ನೌಕರರು ಕಾರ್ಮಿಕ ಇಲಾಖೆಗೆ ದೂರು ನೀಡಬಹುದು. ಆಗ ಅಂತಹ ಹೊರ ಗುತ್ತಿಗೆ ಏಜೆನ್ಸಿಯ ಲೈಸೆನ್ಸ್ನ್ನು ರದ್ದುಪಡಿಸಲಾಗುತ್ತಿದೆ. ಹೊರಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕಾತಿ ಸರ್ಕಾರದ ಪಾಲಿಸಿ ಆಗಿದೆ. ಇದರಲ್ಲಿ ಇಲಾಖೆಗಳ ಪಾತ್ರ ಇಲ್ಲ. ನೌಕರರಿ ಸಂಬಳ ನೀಡುವುದು ಏಜೆನ್ಸಿಯೇ ಹೊರತು ಇಲಾಖೆಯ ಮುಖ್ಯಸ್ಥರಲ್ಲ.

-ಅಕ್ರಂಪಾಷ, ಜಿಲ್ಲಾಧಿಕಾರಿ, ಕೋಲಾರ.

ಚಿತ್ರ ೨೭ ಕೆ.ಎಲ್.ಆರ್. ೦೧ : ಅಕ್ರಂಪಾಷ, ಜಿಲ್ಲಾಧಿಕಾರಿ, ಕೋಲಾರ ರವರ ಭಾವಚಿತ್ರ

ಚಿತ್ರ ೨೭ ಕೆ.ಎಲ್.ಆರ್. ೦೧ಎ : ಪಿ.ಆರ್. ಸೂರ್ಯನಾರಾಯಣ, ಸಿ.ಪಿ.ಐ.ಎಂ. ಮುಖಂಡ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net