

ವಿದ್ಯಾರ್ಥಿಗಳಲ್ಲಿ ಸಮಯ ಪರಿಪಾಲನೆ, ಶ್ರಮ, ಬುದ್ಧಿವಂತಿಕೆ, ನಾಯಕತ್ವ ಗುಣವನ್ನು ವಿಶ್ವವಿದ್ಯಾಲಯಗಳು ಬೆಳೆಸಬೇಕು ಎಂದು ಮೈಸೂರು ವಿವಿ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಡಿ. ಆನಂದ್ ಹೇಳಿದರು.
ಜೆ.ಪಿ. ನಗರದ ಹಿಂದೂಸ್ಥಾನ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಸ್ಪೆಕ್ಟ್ರಾ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ಮಾತನಾಡಿದರು.
ಈಗಿನ ಆಧುನಿಕ ಯುಗವು ಜನರ ಸಮಸ್ಯೆಗಳನ್ನು ಪರಿಹರಿಸುವ ಕೌಶಲವನ್ನು ಬೇಡುತ್ತಿದೆ. ಸಮಯ ಪರಿಪಾಲನೆ, ಶ್ರಮ, ಬುದ್ಧಿವಂತಿಕೆ, ನಾಯಕತ್ವ ಗುಣಗಳು ಪದವೀಧರರಿಗೆ ಕಲಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದರು.
ಕೇವಲ ಸೂತ್ರ, ಪ್ರಮೇಯಗಳ ಅಭ್ಯಾಸವೇ ಕಲಿಕೆ ಆಗುವುದಿಲ್ಲ. ವಾಸ್ತವ ಜೀವನವನ್ನು ಎದುರಿಸಲು ಬೇಕಾದ ಆತ್ಮವಿಶ್ವಾಸವನ್ನು ಶಿಕ್ಷಣ ಮಕ್ಕಳಿಗೆ ಕೊಡಬೇಕಿದೆ. ಸ್ವಂತ ಬಲದಿಂದ ಉದ್ಯಮ ಸೃಷ್ಟಿಸಿ, ಯಶಸ್ಸು ಗಳಿಸುವ ಕೌಶಲವನ್ನು ಯುವ ಜನರು ಕರಗತ ಮಾಡಿಕೊಳ್ಳಬೇಕು ಎಂದರು.
ಬಹು ಶಿಸ್ತೀಯ ಕಲಿಕೆಗೆ ವಿದ್ಯಾರ್ಥಿಗಳು ಮುಂದಾದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಹು ಶಿಸ್ತೀಯ ಕಲಿಕೆಗೆ ಒತ್ತು ನೀಡುತ್ತದೆ. ಪ್ರಾಯೋಗಿಕ ಹಾಗೂ ಸಮಗ್ರ ಶಿಕ್ಷಣವನ್ನು ಉದ್ಯಮಗಳು ಬಯಸುತ್ತಿವೆ. ಅದಕ್ಕಾಗಿ ಶಿಕ್ಷಣ ವ್ಯವಸ್ಥೆಯು ಪರಿವರ್ತನೆ ಆಗುತ್ತಿದೆ. ಉದ್ಯೋಗ ಸೃಷ್ಟಿಗೆ ಪೂರಕವಾಗಿ
ಶಿಕ್ಷಣವನ್ನು ನೀಡಲು ಮುಂದಾಗಿವೆ. ಇದರಿಂದ ದೇಶಾಭಿವೃದ್ಧಿಗೆ ನೆರವಾಗಲಿದೆ ಎಂದರು. ಪ್ರಾಂಶುಪಾಲೆ ಪ್ರೊ.ಸಿ.ಜೆ.ಪ್ರಿಯಾ, ಪ್ರೊ.ಸೂಕ್ಷ್ಮಾ, ವಿಶೇಷಾಧಿಕಾರಿ ಎಬೆಲ್ ಮ್ಯಾಥ್ಯೂ ಪ್ರಸಾದ್ ಇದ್ದರು.