

ನವದೆಹಲಿ: ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21 ವರ್ಷಕ್ಕೆ ಏರಿಸುವುದಕ್ಕೆ ಸಂಬಧಿಸಿದ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸುತ್ತಿರುವ ಸಂಸದೀಯ ಸ್ಥಾಯಿ ಸಮಿತಿ, ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಇತರ ವಿಭಾಗಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ಕಳೆದ ಡಿಸೆಂಬರ್ನಲ್ಲಿ ನಡೆದ ಚಳಿಗಾಲದ ಅಧಿವೇಶನದ ಅಂತ್ಯದಲ್ಲಿ ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ಎತ್ತಿದ್ದರಿಂದ ಇದನ್ನು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ.
ಬಾಲ್ಯ ವಿವಾಹ ತಿದ್ದುಪಡಿ ಮಸೂದೆ -2021ರ ಬಗ್ಗೆ ಅಭಿಪ್ರಾಯ ಹಾಗೂ ಸಲಹೆಗಳನ್ನು ಭಾನುವಾರದಿಂದ ಆರಂಭಿಸಿ 15 ದಿನದೊಳಗೆ ಲಿಖಿತವಾಗಿ ಸಲ್ಲಿಸಬಹುದು ಅಥವಾ ಮೌಖಿಕ ಸಾಕ್ಷ್ಯ ನೀಡಬಹುದು. ಹೆಚ್ಚಿನ ವಿವರಗಳು ರಾಜ್ಯಸಭೆಯ ವೆಬ್ಸೈಟ್ನಲ್ಲಿ ಲಭ್ಯವಿದೆ.
ಹಿರಿಯ ಬಿಜೆಪಿ ಸಂಸದ ವಿನಯ ಸಹಸ್ರಬುದ್ಧೆ ನೇತೃತ್ವದ ಶಿಕ್ಷಣ, ಮಹಿಳೆ, ಯುವಜನ ಹಾಗೂ ಕ್ರೀಡಾ ಸ್ಥಾಯಿ ಸಮಿತಿಗೆ ಈ ಮಸೂದೆಯನ್ನು ಕಳಿಸಲಾಗಿದೆ. ಪರಿಶೀಲನೆಗೆ ಮೂರು ತಿಂಗಳು ಗಡುವನ್ನು ಸಮಿತಿ ವಿಧಿಸಿಕೊಂಡಿದೆ. ಮಸೂದೆ ಪರಿಶೀಲನೆಯ ಸ್ಥಾಯಿ ಸಮಿತಿಯಲ್ಲಿ ಹೆಚ್ಚು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಒತ್ತಾಯ ಪ್ರಬಲವಾಗಿದೆ. ಸದ್ಯಕ್ಕೆ ತೃಣಮೂಲ ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್ ಒಬ್ಬರೇ ಸಮಿತಿಯಲ್ಲಿರುವ ಏಕೈಕ ಮಹಿಳಾ ಪ್ರತಿನಿಧಿಯಾಗಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಮಹಿಳಾ ಸಂಸದರಿಗೆ ಈ ಸಮಿತಿ ತಿದ್ದುಪಡಿ ಮಸೂದೆ ಕುರಿತು ನಡೆಸುವ ಎಲ್ಲ ಸಭೆಗಳಲ್ಲೂ ಭಾಗವಹಿಸಲು ಅವಕಾಶ ಕಲ್ಪಿಸಬೇಕೆಂಬ ಸಲಹೆಯೂ ಕೇಳಿಬಂದಿದೆ. ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು ಹೆಚ್ಚಿಸುವುದಕ್ಕೆ ಸಮಾಜವಾದಿ ಪಕ್ಷ, ಒವೈಸಿ ಅವರ ಪಕ್ಷ ಸೇರಿ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.