ವಿಮಾನದಲ್ಲಿ ಬಂದು ಸರಗಳ್ಳತನ ಮಾಡಿದ್ದವ ಸೇರಿ ಉತ್ತರ ಪ್ರದೇಶದ ಆರು ಆರೋಪಿಗಳ ಬಂಧನ: ಎಸ್ಪಿ ಕೆ.ಎಂ.ಶಾಂತರಾಜು

IMG-20201028-WA0014.jpg
Published on

ಶಿವಮೊಗ್ಗ: ಮಲೆನಾಡಿಗೂ ಉತ್ತರ ಪ್ರದೇಶಕ್ಕೂ ಎತ್ತಲಿಂದ ಎತ್ತ ಸಂಬಂಧ.. ಉಭಯ ನಗರಗಳ ನಡುವೆ ಅಂದಾಜು 1,500ಕ್ಕೂ ಅಧಿಕ ಕಿ.ಮೀ. ಅಂತರವಿದ್ದು, ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಸರಣಿ ಸರಗಳ್ಳತನದ ಮೂಲ ಉತ್ತರಪ್ರದೇಶವೇ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೀರತ್‌ನ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಚಿತ್ರವೆಂದರೆ ಅದರಲ್ಲೊಬ್ಬ ಸರಗಳ್ಳತನಕ್ಕಾಗಿ ಬೆಂಗಳೂರಿಗೆ ವಿಮಾನದಲ್ಲಿ ಬಂದು ಹೋಗಿರುವುದು ಬೆಳಕಿಗೆ ಬಂದಿದೆ.
 ಉತ್ತರ ಪ್ರದೇಶ ಮೀರತ್ ನಗರದ ಗಂಟೆವಾಲಿಗಲ್ಲಿಯ ಫೈಸಲ್ (25), ಸಲ್ಮಾನ್ ಅಲಿಯಾಸ್ ಲಲ್ಲ(24), ನಗ್ಲತಾಸಿಯ ಆಶೀಸ್ ಕುಮಾರ್(36), ಅಹಮ್ಮದ್‌ನಗರದ ಮೆಹತಾಬ್ (35), ಮದೀನಾ ಕಾಲನಿಯ ಸಲ್ಮಾನ್ ಅಲಿಯಾಸ್ ಮಾಮ(22) ಹಾಗೂ ಮೀರತ್‌ನ, ಹಾಲಿ ಜೋಸೆಫ್ ನಗರದ ನಿವಾಸಿ ಮಹಮ್ಮದ್ ಚಾಂದ್ (23) ಬಂಧಿತರು.
2019ರಲ್ಲಿ ಮತ್ತು 2020ರಲ್ಲಿ ಕೋಟೆ ಮತ್ತು ಜಯನಗರ ಠಾಣಾ ವ್ಯಾಪ್ತಿಯ 9 ಸರಗಳ್ಳತನ ಮತ್ತು ಒಂದು ಸರಗಳ್ಳತನ ಯತ್ನ ಪ್ರಕರಣ ಭೇದಿಸಿದ್ದು, ಬಂಧಿತರಿಂದ 9.31 ಲಕ್ಷ ರೂ. ಮೌಲ್ಯದ 213.20 ಗ್ರಾಂ ಚಿನ್ನಾಭರಣ, ಎರಡು ಪಿಸ್ತೂಲ್, 12 ಜೀವಂತ ಗುಂಡುಗಳು, ಮಾರಕಾಸ್ತ್ರಗಳು ಮತ್ತು ಬೈಕ್‌ನ್ನು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಕೆ.ಎಂ.ಶಾಂತರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಲ್ಲಿ 5ನೇ ಆರೋಪಿ ಸಲ್ಮಾನ್ ಅಲಿಯಾಸ್ ಮಾಮ ಒಮ್ಮೆ ಬೆಂಗಳೂರು ಮಾರ್ಗವಾಗಿ ವಿಮಾನದಲ್ಲಿ ಬಂದು ಶಿವಮೊಗ್ಗದಲ್ಲಿ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಮತ್ತೆ ವಿಮಾನದಲ್ಲೇ ವಾಪಸ್ಸಾಗಿದ್ದ. ಮತ್ತೊಂದು ವಿಶೇಷವೆಂದರೆ ಆರೋಪಿಗಳಿಗೆ ಕುಟುಂಬಸ್ಥರೇ ಹಣ ಕೊಟ್ಟು ಕಳುಹಿಸಿಕೊಡುತ್ತಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net