

ವಿರಾಜಪೇಟೆ : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಾವಿಗೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಭಾರತಿಯ ಜನತಾ ಪಕ್ಷದ ಐಟಿ ಸೆಲ್ ಎಂಬುದು ಇಲ್ಲದ್ದನ್ನು ಸೃಷ್ಟಿ ಮಾಡುವ ತಂಡವಾಗಿದೆ ಎಂದು ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೊಕ್ಕಂಡ ಅಪ್ಪಣ್ಣ ದೂರಿದ್ದಾರೆ.
ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಸೋಮವಾರಪೇಟೆ ತಾಲೂಕಿನ ಯಡುಂಡೆ ಗ್ರಾಮದ ವಿನಯ್ ಸೋಮಯ್ಯ ಫೆಬ್ರವರಿ ತಿಂಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಒಂದು ಅವಹೇಳನಕಾರಿ ಸಂದೇಶದ ವಿರುದ್ಧ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತೆರಳಿದಾಗ ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಲು ನಿರಾಕರಿಸಿದರು. ಈ ಹಿನ್ನ್ನೆಲೆಯಲ್ಲಿ ಮಡಿಕೇರಿ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಆದೇಶ ನೀಡಿದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಸೋಮಯ್ಯ ಅವರು ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಹೈಕೋರ್ಟ್ ನೀಡಿದ ಕೆಲವು ಷರತ್ತುಗಳನ್ನು ಸೋಮಯ್ಯ ಪಾಲಿಸದ ಕಾರಣ ಪೊಲೀಸರು ವಿಚಾರಣೆಗಾಗಿ ಕರೆದರೂ ವಿಚಾರಣೆ ಹಾಜರಾಗಲಿಲ್ಲ. ಅದರಿಂದ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದರು ಎಂದರು.
ಪ್ರಕರಣದಲ್ಲಿ ಜಿಲ್ಲೆಯ ಇಬ್ಬರು ಶಾಸಕರ ಯಾವುದೇ ಪಾತ್ರವಿಲ್ಲ. ಶಾಸಕರಿಬ್ಬರಿಗೂ ವಿನಯ್ ಸೋಮಯ್ಯ ಪರಿಚಯವಿಲ್ಲ. ಬಿಜೆಪಿ ಅವರು ಕೆಟ್ಟ ಸಂಪ್ರದಾಯಗಳನ್ನು ಹುಟ್ಟು ಹಾಕಿ ವಿವಾದ ಸೃಷ್ಟಿ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಇಬ್ಬರು ಶಾಸಕರು ಜಿಲ್ಲೆಯಲ್ಲಿ ಉತ್ತಮವಾಗಿ ಜನಪರ ಕೆಲಸ ಮಾಡುತ್ತಿದು,್ದ ಇವರ ತೇಜೋವಧೆ ಮಾಡಬೇಕೆಂಬ ಕಾರಣದಿಂದ ಈ ವಿಚಾರವನ್ನು ಬಳಸಿಕೊಂಡು ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಈ ಕೆಟ್ಟ ಪ್ರವೃತಿ ಸಮಾಜಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಸರ್ಕಾರಿ ವಕೀಲ ನರೆಂದ್ರನಾಥ್ ಕಾಮತ್, ವಕೀಲೆ ಶೃಂಗಾ ಸೋಮಣ್ಣ ಉಪಸ್ಥಿತರಿದ್ದರು.