

ಹಾಸನ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸಿದ್ಧತೆ ಆರಂಭಿಸಿರುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಹ ಚುನಾವಣೆ ಶಾಂತಿಯುತವಾಗಿ ನಡೆಯಬೇಕೆಂಬ ಉದ್ದೇಶದಿಂದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಉತ್ತರದಿಂದ ದಕ್ಷಿಣಕ್ಕೆ 129 ಕಿ.ಮೀ. ಉದ್ದಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ 116 ಕಿ.ಮೀ. ಹರಡಿಕೊಂಡಿರುವ, ಒಟ್ಟು 6826.15 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಬಹುದೊಡ್ಡ ಜಿಲ್ಲೆಯಾಗಿರುವ ಹಾಸನದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸವಾಲಿನ ಕೆಲಸವೇ ಸರಿ. ಅದರಲ್ಲೂ ರಾಜಕೀಯವಾಗಿ ಅತ್ಯಂತ ಹೆಚ್ಚು ಚಟುವಟಿಕೆಗಳಿಂದ ಕೂಡಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಹಾಸನದಲ್ಲಿ ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ಏರ್ಪಡುವುದು ಸಹಜ.
ಜಿಲ್ಲಾ ಕೇಂದ್ರ ಹಾಸನ ಸೇರಿ ಒಟ್ಟು 8 ತಾಲೂಕುಗಳನ್ನು ಹೊಂದಿರುವ ಹಾಸನ ಜಿಲ್ಲೆಯಲ್ಲಿ 38 ಹೋಬಳಿಗಳು, 2369 ಹಳ್ಳಿಗಳು ಇವೆ. ಜನಸಂಖ್ಯೆ 18 ಲಕ್ಷ ದಾಟಿದೆ. ಇಂತಹ ದೊಡ್ಡ ಜಿಲ್ಲೆಯಲ್ಲಿ ಇರುವ ಪೊಲೀಸ್ ಠಾಣೆಗಳ ಸಂಖ್ಯೆ 31 ಮತ್ತು ವಿವಿಧೆಡೆ 10 ಉಪ ಠಾಣೆಗಳು ಇವೆ. ಆದರೆ ಬಹುತೇಕ ಹಳ್ಳಿಗಳು ಠಾಣೆಯಿಂದ 20-30 ಕಿ.ಮೀ. ದೂರದಲ್ಲಿ ಇರುವುದರಿಂದ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಷ್ಟಸಾಧ್ಯ.
ಮದ್ಯ ಮಾರಾಟದ ಪರಿಣಾಮ:
ಮದ್ಯ ಮಾರಾಟಕ್ಕೆ ಸರ್ಕಾರವೇ ಉತ್ತೇಜನ ನೀಡುತ್ತಿರುವುದರಿಂದ ಈಗ ಎಲ್ಲೆಂದರಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಬಾರ್ ಅಂಡ್ ರೆಸ್ಟೋರೆಂಟ್ (ಸಿಎಲ್-7) ಹೆಸರಲ್ಲಿ ಮದ್ಯ ಮಾರಾಟ ಪರವಾನಗಿಯನ್ನು ಅಬಕಾರಿ ಇಲಾಖೆ ಕಡಲೆಪುರಿಯಂತೆ ಹಂಚುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಬಾರ್‌ಗಳು ತಲೆ ಎತ್ತಿವೆ. ಸಿಎಲ್-7 ಹೆಸರಲ್ಲಿ ಪರವಾನಗಿ ಪಡೆದವರು ಬಹಿರಂಗವಾಗಿ ತೆರೆದ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡಲು ನಿಯಮದಲ್ಲಿ ಅವಕಾಶ ಇಲ್ಲವಾದರೂ ಅದಾವುದೂ ಇಲ್ಲಿ ಪಾಲನೆ ಆಗುತ್ತಿಲ್ಲ. ಅಲ್ಲದೆ, ಅಬಕಾರಿ ಇಲಾಖೆಯು ಮದ್ಯ ಮಾರಾಟಗಾರರಿಗೆ ಇಂತಿಷ್ಟೇ ಪ್ರಮಾಣದ ಮದ್ಯ ಮಾರಾಟ ನಡೆಸಬೇಕು ಎಂಬ ಕಟ್ಟುನಿಟ್ಟಿನ ಗುರಿ ನೀಡುತ್ತಿರುವುದರಿಂದ ಮದ್ಯ ಮಾರಾಟಗಾರರು ಹಳ್ಳಿಗಳ ಚಿಲ್ಲರೆ ಅಂಗಡಿಗಳಿಗೂ ಮದ್ಯ ಸರಬರಾಜು ಮಾಡಿ ಮಾರಾಟ ಹೆಚ್ಚಿಸುತ್ತಿದ್ದಾರೆ. ಇದರಿಂದ ಎಲ್ಲೆಡೆಯೂ ಮದ್ಯ ಮುಕ್ತವಾಗಿ ಲಭ್ಯವಾಗುತ್ತಿದ್ದು, ಅದರ ಪರಿಣಾಮ ಕಾನೂನು ಮತ್ತು ಸುವ್ಯವಸ್ಥೆಯ ಮೇಲಾಗುತ್ತಿದೆ ಎಂಬುದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಪೊಲೀಸ್ ಚೌಕಿಗಳ ಸ್ಥಾಪನೆ:
ಕಾನೂನು ಸುವ್ಯವಸ್ಥೆಯ ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಜಿಲ್ಲಾ ಪೊಲೀಸ್ ಇಲಾಖೆಯು ಠಾಣೆಯಿಂದ ದೂರ ಇರುವ ಪ್ರದೇಶದ ಪ್ರಮುಖ ಹಳ್ಳಿಯಲ್ಲಿ ಪೊಲೀಸ್ ಚೌಕಿ ಸ್ಥಾಪಿಸುವ ಕಾರ್ಯ ಹಮ್ಮಿಕೊಂಡಿದೆ.
ಹಾಸನ ತಾಲೂಕು ಶಾಂತಿಗ್ರಾಮ ಹೋಬಳಿ ಬಿಜೇಮಾರನಹಳ್ಳಿಯಲ್ಲಿ ಕಳೆದ ವಾರ ಸ್ಥಳೀಯರ ಸಹಕಾರದೊಂದಿಗೆ ಪೊಲೀಸ್ ಚೌಕಿ ಆರಂಭಿಸಿದ್ದ ಇಲಾಖೆಯು ಈಗ ತಾಲೂಕಿನ ನಿಟ್ಟೂರು ಗ್ರಾಮದಲ್ಲೂ ಪೊಲೀಸ್ ಚೌಕಿ ಸ್ಥಾಪಿಸಿದ್ದು, ಫೆ.6 ರಂದು ಕಾರ್ಯಾರಂಭಿಸಲಿದೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರುವ ನಿಟ್ಟೂರು, ಹಾಸನ ತಾಲೂಕಿನ ಗಡಿ ಭಾಗದಲ್ಲಿದೆ. ಹಳೇಬೀಡು, ಜಾವಗಲ್, ಗಂಡಸಿ ಹಾಗೂ ದುದ್ದ ಪೊಲೀಸ್ ಠಾಣೆಗಳ ಗಡಿಗೆ ಹೊಂದಿಕೊಂಡಂತಿರುವ ಈ ಗ್ರಾಮಕ್ಕೆ ನಾಲ್ಕು ದಿಕ್ಕುಗಳಿಂದ ರಸ್ತೆಗಳ ಸಂಪರ್ಕವಿದ್ದು, ಸುಪ್ರಸಿದ್ಧ ಪುರದಮ್ಮ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಗಣ್ಯ ವ್ಯಕ್ತಿಗಳು ನಿಟ್ಟೂರು ವೃತ್ತದ ಮಾರ್ಗವಾಗಿ ಸಂಚರಿಸುತ್ತಾರೆ.
ಈ ಗ್ರಾಮದಲ್ಲಿ ಸಣ್ಣ ಮಾರುಕಟ್ಟೆ ಇದ್ದು, ಸುತ್ತ ಮುತ್ತಲಿನ ಗ್ರಾಮಸ್ಥರು ವ್ಯಾಪಾರ-ವಹಿವಾಟು ನಡೆಸುತ್ತಾರೆ. ಅಗತ್ಯ ವಸ್ತುಗಳ ಖರೀದಿ ಜೊತೆಗೆ ಮದ್ಯ ಸೇವನೆಗೆ ಇಲ್ಲಿಗೆ ಜನ ಬರುವುದರಿಂದ ಸಾಮಾನ್ಯವಾಗಿ ಜನಸಂದಣಿ ಇರುತ್ತದೆ. ಈ ಕಾರಣದಿಂದ ಪ್ರತಿ ದಿನ ಸಂಜೆ ಕುಡಿತದ ಅಮಲಿನಲ್ಲಿ ಅಸಭ್ಯ ವರ್ತನೆ ಮತ್ತು ಘರ್ಷಣೆಗಳು ಈ ಪ್ರದೇಶದಲ್ಲಿ ವರದಿಯಾಗುತ್ತಿದ್ದವು. ಈ ಭಾಗದಲ್ಲಿ ಗಲಭೆ ಅಥವಾ ಗಲಾಟೆ ನಡೆದರೆ ಹಾಸನ ನಗರದಲ್ಲಿರುವ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಸಕಾಲಕ್ಕೆ ತಲುಪುವುದು ಕಷ್ಟವಾಗಿದೆ. ಅಲ್ಲದೆ ನಿಟ್ಟೂರಿಗೆ ಹತ್ತಿರವಾದ ಬೂದೇಶ್ವರ ಮಠ, ಶ್ರೀರಾಮದೇವರ ಹಳ್ಳ ಮತ್ತು ರಂಗನಾಥಸ್ವಾಮಿ ದೇವಸ್ಥಾನಗಳಲ್ಲಿ ಧಾರ್ಮಿಕ ಸಮಾರಂಭಗಳು, ಜಾತ್ರೆ, ಸಂತೆಗಳು ನಡೆಯುವ ಸಂದರ್ಭದಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರಿಗೆ ರಾತ್ರಿ ಹೊತ್ತು ತಂಗಲು, ಶಸ್ತ್ರಾಸ್ತ್ರಗಳನ್ನು ಇಡಲು ಒಂದು ಭದ್ರಕೋಟೆ ಇರಲಿಲ್ಲ. ಘಟನೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಪೊಲೀಸರು ಜನರಿಗೆ ಹತ್ತಿರವಿರಬೇಕು ಮತ್ತು ಅಪರಾಧಗಳನ್ನು ತಡೆಯುವ ದೃಷ್ಟಿಯಿಂದ ಶ್ರಮಿಸುವ ಪೊಲೀಸರಿಗೆ ಕನಿಷ್ಠ ಸೌಕರ್ಯ ಒದಗಿಸುವ ಸಲುವಾಗಿ ನಿಟ್ಟೂರಿನಲ್ಲಿ ಚೌಕಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ‘ವಿಜಯವಾಣಿ’ಗೆ ತಿಳಿಸಿದರು.
ಡಿವೈಎಸ್‌ಪಿ ಶ್ರಮ:
ಹಾಸನ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಉದಯಭಾಸ್ಕರ್ ಅವರು ಎಸ್‌ಪಿ ಹರಿರಾಮ್ ಶಂಕರ್ ಮತ್ತು ಎಎಸ್ಪಿ ಎಂ.ಕೆ. ತಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ಆಡಳಿತದೊಂದಿಗೆ ಚರ್ಚಿಸಿ ಗ್ರಾಮದಲ್ಲಿದ್ದ ಅನುಪಯುಕ್ತ ಪ್ರಯಾಣಿಕರ ತಂಗುದಾಣವನ್ನು ವಾಚನಾಲಯವಾಗಿ ಮಾರ್ಪಡಿಸಿದ್ದು, ಹಾಲಿ ಇರುವ ಗ್ರಾಪಂ ಗ್ರಂಥಾಲಯವನ್ನು ಅಲ್ಲಿಗೆ ಸ್ಥಳಾಂತರಿಸಿದ್ದಾರೆ. ಗ್ರಂಥಾಲಯ ಕೊಠಡಿಯನ್ನು ನವೀಕರಿಸಿ ನಿಟ್ಟೂರು ಪೊಲೀಸ್ ಚೌಕಿಯಾಗಿ ರೂಪಿಸಲಾಗಿದೆ.
‘‘ಆಲೂರು ತಾಲೂಕು ಮಗ್ಗೆ ಗ್ರಾಮ ಮತ್ತು ಸಕಲೇಶಪುರ ತಾಲೂಕು ಹಾನುಬಾಳು ಗ್ರಾಮದಲ್ಲಿ ಪೊಲೀಸ್ ಚೌಕಿ ಸ್ಥಾಪನೆ ಮಾಡಬೇಕೆಂಬ ಬೇಡಿಕೆ ಇದೆ. ಈ ಸಂಬಂಧ ಸ್ಥಳೀಯ ಸೌಲಭ್ಯ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಈಗ ಸ್ಥಾಪಿಸಲಾಗಿರುವ ಪೊಲೀಸ್ ಚೌಕಿಗಳಿಗೆ ಸಮೀಪದ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ರೊಟೇಷನ್ ಮೇಲೆ ನಿಯೋಜಿಸಿ ಕಾರ್ಯನಿರ್ವಹಿಸಲಾಗುವುದು. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚಿನ ಪೊಲೀಸ್ ಪೇದೆಗಳ ಕೊರತೆ ಇದ್ದು, ನೇಮಕಾತಿ ಮತ್ತು ತರಬೇತಿ ಪ್ರಕ್ರಿಯೆ ನಡೆಯುತ್ತಿದೆ. ಒಂದರೆಡು ವರ್ಷಗಳಲ್ಲಿ ಸಿಬ್ಬಂದಿ ಕೊರತೆ ನೀಗಲಿದೆ.’’
ಹರಿರಾಮ್ ಶಂಕರ್, ಎಸ್ಪಿ, ಹಾಸನ.