ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶಾಂತಿಯುತ ಶೇ.೯೫.೮೨ ರಷ್ಟು ಮತದಾನ/ ಬಿಗಿ ಬಂದೋಬಸ್ತ್/ಮತಗಟ್ಟೆ ಮುಂದೆ ಜನಜಾತ್ರೆ/ಮತದಾರರಿಗೆ ನೀರು, ಊಟದ ವ್ಯವಸ್ಥೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಮತದಾನದಲ್ಲಿ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು ಶೇ.೯೫.೮೨ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಜಿಲ್ಲೆಯ ಎಲ್ಲಾ ಆರು ತಾಲ್ಲೂಕು ಕೇಂದ್ರಗಳಲ್ಲಿ ನಡೆದ ಮತದಾನ ಶಾಂತಿಯುತವಾಗಿದ್ದು, ಒಟ್ಟು ನೋಂದಾಯಿಸಿದ್ದ ೪೩೬೦ ಮತಗಳ ಪೈಕಿ ೨೨೯೭ ಮತಗಳು ಚಲಾವಣೆಯಾಗಿ ಶೇ.೯೫.೮೨ ರಷ್ಟು ಮತದಾನವಾಯಿತು. ೨೦೬೩ ಮಹಿಳಾ ಮತದಾರರು, ೨೨೯೭ ಪುರುಷ ಮತದಾರರು ತಮ್ಮ ಹಕ್ಕು ಚಲಾಯಸಿದ್ದಾರೆ.

ತಾಲ್ಲೂಕುವಾರು ಮತದಾನದ ವಿವರ
ಮಾಲೂರಿನಲ್ಲಿ ೬೯೩ ಮತದಾರರ ಪೈಕಿ೬೬೯ ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಅತಿ ಹೆಚ್ಚು ಅಂದರೆ ಶೇ.೯೮.೨೯ ರಷ್ಟು ಮತದಾನವಾಗಿದೆ. ಉಳಿದಂತೆ ಶ್ರೀನಿವಾಸಪುರದಲ್ಲಿ ಒಟ್ಟು ೭೩೧ ಮತದಾರರ ಪೈಕಿ೭೦೫ ಮಂದಿ ಹಕ್ಕು ಚಲಾಯಿಸಿದ್ದು, ಶೇ.೯೬.೪೪ ಮತದಾನವಾಗಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ ಒಟ್ಟು ೬೩೧ ಮತದಾರರ ಪೈಕಿ ೬೧೫ ಮಂದಿ ಮತದಾನ ಮಾಡಿದ್ದು, ಶೇ.೯೭.೪೬ ಮತದಾನವಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದ ಎರಡು ಮತಗಟ್ಟೆಗಳಲ್ಲಿ ಒಟ್ಟು ೧೭೩೩ ಮತದಾರರ ಪೈಕಿ ೧೪೩೦ ಮಂದಿ ತಮ್ಮ ಹಕ್ಕು ಚಲಾಯಿಸಿದ್ದು, ಶೇ.೯೩.೧೬ ಮತದಾನವಾಗಿದೆ.

ಉಳಿದಂತೆ ಬಂಗಾರಪೇಟೆ ತಾಲ್ಲೂಕಿನಲ್ಲಿ ಒಟ್ಟು ೪೩೫ ಮತದಾರರ ಪೈಕಿ ೪೨೩ ಮಂದಿ ಹಕ್ಕು ಚಲಾಯಿಸಿದ್ದು ಶೇ.೯೭.೨೪ ಮತದಾನವಾಗಿದೆ. ಕೆಜಿಎಫ್ ತಾಲ್ಲೂಕಿನಲ್ಲಿ ಒಟ್ಟು ೬೯೩ ಮತದಾರರಿದ್ದು, ೬೬೯ ಮಂದಿ ಹಕ್ಕು ಚಲಾಯಿಸಿದ್ದರಿಂದ ೯೬.೫೪ ಮತದಾನವಾಗಿದೆ.

ಮಧ್ಯಾಹ್ನ ೨ ಗಂಟೆಗೆ ಶೇ.೬೮.೬೪ ಮತದಾನ
ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕು ಕಚೇರಿಗಳಲ್ಲೇ ಮತದಾನ ನಡೆದಿದ್ದು ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಳವಡಿಸಿದ್ದ ಎರಡು ಮತಗಟ್ಟೆಗಳಲ್ಲಿ ಬೆಳಗ್ಗೆ ೮ ಗಂಟೆಗೆ ಮತದಾನ ಆರಂಭಗೊAಡಿದ್ದು, ಆರಂಭದಲ್ಲಿ ನಿರುತ್ಸಾಹ ಕಂಡು ಬಂತು.

೧೧ ಗಂಟೆಯಾಗುತ್ತಿದ್ದAತೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಧಾವಿಸಿದ್ದರಿಂದ ಮತಗಟ್ಟೆಗಳ ಮುಂದೆ ಉದ್ದುದ್ದ ಸಾಲುಗಳು ಕಂಡು ಬಂದಿದ್ದು, ಮಧ್ಯಾಹ್ನ ೨ ಗಂಟೆ ವೇಳೆಗೆ ಶೇ.೬೮.೬೪ ರಷ್ಟು ಮತದಾನವಾಗಿತ್ತು.

ಮತಗಟ್ಟೆ ಮುಂದೆ ಜನಜಾತ್ರೆ ಜೋರು
ಮತದಾನ ನಡೆದ ತಾಲ್ಲೂಕು ಕಚೇರಿಗಳ ಮುಂದೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಹತ್ತಾರು ಪೆಂಡಾಲ್ ಹಾಕಿ ಶಿಕ್ಷಕರಲ್ಲಿ ಮತಯಾಚನೆ ನಡೆಸುವುದರ ಜತೆಗೆ ಬಂದ ಶಿಕ್ಷಕರಿಗೆ ನೀರು, ಊಟದ ವ್ಯವಸ್ಥೆ ಮಾಡಿದ್ದರು.ತಾಲ್ಲೂಕು ಕಚೇರಿ ಆವರಣದೊಳಗೆ ಪ್ರಚಾರಕ್ಕೆ ಅವಕಾಶ ನೀಡದ ಪೊಲೀಸರು ಗೇಟ್‌ನಲ್ಲಿ ಮತದಾರರಿಗೆ ಮಾತ್ರ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಿದರು. ತಾಲ್ಲೂಕು ಕಚೇರಿಯಲ್ಲಿ ಚುನಾವಣೆ ನಡೆದ ಹಿನ್ನಲೆಯಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗಲಿಲ್ಲ.

ವೈಎಎನ್ ಪರವಾಗಿ ಸಂಸದ,ಮುಖAಡರು
ಡಾ.ವೈ.ಎ.ನಾರಾಯಣಸ್ವಾಮಿ ಪರವಾಗಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಮುಖಂಡರಾದ ಸಿಎಂಆರ್.ಶ್ರೀನಾಥ್,ಬಣಕನಹಳ್ಳಿ ನಟರಾಜ್, ಬಿಜೆಪಿ ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ, ಮಾಗೇರಿ ನಾರಾಯಣಸ್ವಾಮಿ, ಸಿ.ಡಿ.ರಾಮಚಂದ್ರೇಗೌಡ, ಅರುಣಮ್ಮ, ತಿಮ್ಮರಾಯಪ್ಪ, ಸಹ್ಯಾದ್ರಿ ಉದಯಕುಮಾರ್, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಖಾಸಗಿ ಶಾಲೆಗಳ ಸಂಘದ ಸೋಮಶೇಖರ್, ಮಂಜುನಾಥ್,ಶಿಕ್ಷಕ ಮುರಳಿಮೋಹನ್ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರವಾಗಿ ಶಾಸಕ ಕೊತ್ತೂರು ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಗೌಡ,ಮೈಲಾಂಡಹಳ್ಳಿ ಮುರಳಿ ಶಿಕ್ಷಕ, ಉಪನ್ಯಾಸಕ ಸಂಘಟನೆಗಳ ನಾಗಾನಂದ್ ಕೆಂಪರಾಜ್ ಮತ್ತಿತರರು ಮತಯಾಚನೆ ನಡೆಸಿದರು.

ಬಿಜೆಪಿ,ಜೆಡಿಎಸ್‌ಗೆ ತೀವ್ರ ಪೈಪೋಟಿ ನೀಡಿರುವ ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಪರವಾಗಿ ಖಾಸಗಿ ಶಾಲೆಗಳ ಸಂಘದ ಜಿಲ್ಲಾಧ್ಯಕ್ಷ ಸದಾನಂದ್, ಕಾರ್ಯದರ್ಶಿ ಕಾಡುಗುರು ನಾಗಭೂಷಣ್, ಬಸವೇಶ್ವರ ಜಗದೀಶ್, ಉಪನ್ಯಾಸಕ ಅಶ್ವಥ್ಥಗೌಡ ಮತ್ತಿತರರು ಅಬ್ಬರದ ಪ್ರಚಾರ ನಡೆಸಿದರು.

ಚಿತ್ರ ೦೩ ಕೆ.ಎಲ್.ಆರ್. ೦೩ : ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಮತದಾನದಲ್ಲಿ ಶಿಕ್ಷಕರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಕೋಲಾರದ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ಉದ್ದುದ್ದ ಸಾಲುಗಳು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net