

ಬೆಟ್ಟದಪುರ: ಈಚೂರು ಗ್ರಾಮದ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು, ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಟ್ರಾನ್ಸ್‌ಫಾರ್ಮರ್ ಬಳಿ ಜಮಾವಣೆಗೊಂಡ ರೈತರು, ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ತಿಂಗಳಿನಿಂದ ಟ್ರಾನ್ಸ್‌ಫಾರ್ಮರ್‌ನಲ್ಲಿ ಸಮಸ್ಯೆ ಎದುರಾಗುತ್ತಿದ್ದು, ಮೂರು ದಿನದ ಹಿಂದೆ ಅದನ್ನು ಸರಿಪಡಿಸಿ ಹೊಸದನ್ನು ಅಳವಡಿಸಲಾಗಿತ್ತು. ಆದರೆ, ಏಕಾಏಕಿ ರಾತ್ರಿ ಸಮಯದಲ್ಲಿ ಸೆಸ್ಕ್ ಸಿಬ್ಬಂದಿ ಅದನ್ನು ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಕುಡಿಯುವ ನೀರಿಗೂ ಸಮಸ್ಯೆ ಇದ್ದು, ಸರಿಯಾದ ಸಮಯದಲ್ಲಿ ಮಳೆಯಾಗದ ಕಾರಣ ಕೊಳವೆಬಾವಿಯಿಂದ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿದೆ. ಈ ನಡುವೆ ವಿದ್ಯುತ್ ಸ್ಥಗಿತಗೊಳಿಸಿರುವ ಪರಿಣಾಮ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಬಗ್ಗೆ ಸೆಸ್ಕ್‌ಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಸ್ಪಂದಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂಬಂಧ ವಿಜಯವಾಣಿಯೊಂದಿಗೆ ಮಾತನಾಡಿದ ಸೆಸ್ಕ್ ಎಇಇ ಪ್ರಶಾಂತ್, ಸಂಬಂಧಪಟ್ಟ ಟ್ರಾನ್ಸ್‌ಫಾರ್ಮರ್‌ನ ಆರ್‌ಆರ್ ನಂಬರ್ ಕೊಡುವಂತೆ ರೈತರಿಗೆ ಮನವಿ ಮಾಡಲಾಗಿದೆ. ಈಗಾಗಲೇ ಅಲ್ಲಿ ಓವರ್ ಲೋಡ್ ಆಗಿ ಸಮಸ್ಯೆ ಉಂಟಾಗಿತ್ತು. ಅಲ್ಲದೆ ಅತಿಕ್ರಮವಾಗಿ ವಿದ್ಯುತ್ ಬಳಸುತ್ತಿರುವ ರೈತರನ್ನು ಹತೋಟಿಗೆ ತರುವ ಉದ್ದೇಶದಿಂದ ಬಂದ್ ಮಾಡಲಾಗಿತ್ತು. ಇನ್ನು ಈಚೂರು ಬೋರೆಯಲ್ಲಿರುವ ಟ್ರಾನ್ಸ್‌ಫಾರ್ಮರ್ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಮಹದೇವ್, ಯೋಗೇಶ್, ನಿಂಗೇಗೌಡ, ರಾಮೇಗೌಡ, ಹರೀಶ್, ರಾಜೇಗೌಡ, ನಿಂಗೇಗೌಡ, ಮಂಜು, ಸೈಯದ್ ಇಮ್ರಾನ್, ಸ್ವಾಮಿ, ಮಧು, ಕಾಂತರಾಜು, ವೆಂಕಟರಾಮು, ನಾಗೇಗೌಡ ಇತರರು ಇದರು.