ವಿದ್ಯುತ್ ದೀಪಾಲಂಕಾರ ವೀಕ್ಷಿಸಿದ ಸಿಎಂ

29 (4)
Published on

ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ರಾತ್ರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯ ಮರುದಿನ ಪ್ರವಾಸೋದ್ಯಮ ಇಲಾಖೆಯ ಅಂಬಾರಿ ಬಸ್‌ನಲ್ಲಿ ಸಂಚರಿಸಿ ಅವರು ವಿದ್ಯುತ್ ದೀಪಾಲಂಕಾರ ವೀಕ್ಷಿಸಿದರು.

ರಾಮಸ್ವಾಮಿ ವೃತ್ತದಿಂದ ಆರಂಭವಾದ ದೀಪಾಲಂಕಾರ ವೀಕ್ಷಣೆಯು ಬಸವೇಶ್ವರ ವೃತ್ತ, ಜೆಎಸ್‌ಎಸ್ ಮಹಾವಿದ್ಯಾಪೀಠ ವೃತ್ತ, ಹಾಡಿರ್ಂಜ್ ವೃತ್ತ, ಕೆ.ಆರ್.ವೃತ್ತ, ಆಯುರ್ವೇದ ಕಾಲೇಜು ವೃತ್ತ, ಹೈವೆ ವೃತ್ತದ ಮೂಲಕ ಸಾಗಿ ಎಲ್‌ಐಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.

ತಮ್ಮ ಜೊತೆಗಿದ್ದವರಿಗೆ ಮೈಸೂರಿನ ಅರಮನೆ ಹಾಗೂ ಮಾರ್ಗ ಮಧ್ಯಮ ಸ್ಥಳಗಳ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ವಿವರಿಸಿ, ಅದರ ಹಿನ್ನೆಲೆ ಹಾಗೂ ಮಹತ್ವವನ್ನು ತಿಳಿಸಿಕೊಟ್ಟಿದ್ದು ವಿಶೇಷವಾಗಿತ್ತು.

ಸಿದ್ದುಗೆ ಜೈಕಾರ: ರಾಮಸ್ವಾಮಿ ವೃತ್ತದ ಆರಂಭದಿಂದಲೇ ರಸ್ತೆ ಬದಿಯಲ್ಲಿದ್ದ ಸಾರ್ವಜನಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ ಕಾರ ಹಾಕಿ ಅಭಿನಂದಿಸಿದರು. ಬಡವರ ಬಂಧು ಸಿದ್ದರಾಮಯ್ಯ ಎಂಬಿತ್ಯಾದಿ ಘೋಷಣೆ ಕೂಗಿದರು.

ಟ್ರಾಫಿಕ್ ಜಾಮ್ :

ಸಿಎಂ ಸಿದ್ದರಾಮಯ್ಯ ಅವರು ದಸರಾ ದೀಪಾಲಂಕಾರ ವೀಕ್ಷಣೆ ಮಾಡುವ ನಿಟ್ಟಿನಲ್ಲಿ ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸಿಎಂ ಆಗಮನದ ಹಿನ್ನೆಲೆಯಲ್ಲಿ ಹಲವು ರಸ್ತೆಗಳು ಹಾಗೂ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಪರಿಣಾಮ ವಾಹನ ಸವಾರರು ಹಾಗೂ ಸಾರ್ವಜನಿಕರು ವಾಹನಗಳಿಂದ ಹಾರನ್ ಶಬ್ದ ಮಾಡಿದ ಪ್ರಸಂಗವೂ ನಡೆಯಿತು.

ದೀಪಾಲಂಕಾರ ವೀಕ್ಷಣೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಗ್ಯಾರಂಟಿ ಅನುಷ್ಠಾನದ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net