

ಶಿಕಾರಿಪುರ: ಆಧುನಿಕ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳುವುದು ಬಹಳ ಅವಶ್ಯಕ. ಸಮಾಜದ ಯಶಸ್ವಿ ಮತ್ತು ಉತ್ಪಾದಕ ಭಾಗಗಳಾಗಿ ಪರಿವರ್ತಿಸುವ ಕೌಶಲಗಳನ್ನು ಕಲಿಯುವ ಅಗತ್ಯವಿದೆ ಎಂದು ಪ್ರಾಚಾರ್ಯ ಡಾ.ಜಿ.ಆರ್.ಹೆಗಡೆ ಹೇಳಿದರು.
ಶನಿವಾರ ಕುಮದ್ವತಿ ಸ್ನಾತಕೋತ್ತರ ವಾಣಿಜ್ಯ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಎಂ.ಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಫ್ರೆಷರ್ಸ್ ಪಾರ್ಟಿಗಳು ಹೊಸ ವಿದ್ಯಾರ್ಥಿಗಳಿಗೆ ವಿನಮ್ರತೆ, ಹೊಸ ಜೀವನ ಮತ್ತು ಬದಲಾವಣೆ, ಕಾಲೇಜು ಮತ್ತು ಅದರ ಪರಿಸರ ಕುರಿತು ಪರಿಚಯಿಸುವ ಒಂದು ಸುಂದರ ಕಾರ್ಯಕ್ರಮ ಎಂದರು.
ಕುಮದ್ವತಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ.ಸಿ ರವೀಂದ್ರ ಮಾತನಾಡಿ ಶಿಕ್ಷಣ ಎಂಬುದು ಕಲಿಕೆ, ಕೌಶಲ್ಯ, ಅಭಿಪ್ರಾಯಗಳನ್ನು ರೂಪಿಸುವ ಪ್ರಕ್ರಿಯೆ. ಯುವ ಪೀಳಿಗೆಯು ಮುಂದಿನ ಜೀವನವನ್ನು ಸುವ್ಯವಸ್ಥಿತವಾಗಿ ರೂಪಿಸಿಕೊಳ್ಳಬೇಕು ಎಂದರು.
ಐಕ್ಯೂಎಸಿ ಮುಖ್ಯಸ್ಥರಾದ ಡಾ. ಟಿ.ಆರ್ ಪರಶುರಾಮ ಮಾತನಾಡಿ ಜ್ಞಾನವು ಕೌಶಲ್ಯ, ಸೃಜನಶೀಲತೆ ಜತೆಗೂಡಿ ಕಾರ್ಯ ಪ್ರವೃತ್ತವಾದಾಗ ಮಾತ್ರ ಸಾಧನೆಯ ಶಿಖರ ಏರುವಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.