ವಿದ್ಯಾರ್ಥಿಗಳು ವೃತ್ತಿಪರರಾಗಲು ದೂರದೃಷ್ಟಿ ಬೆಳೆಸಿಕೊಳ್ಳಲಿ

4
Published on

ಕಾನೂನು ಶಾಸ್ತ್ರವನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ವೃತ್ತಿಪರರಾಗಲು ದೂರದೃಷ್ಟಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಇ.ಎಸ್. ಇಂದ್ರೇಶ್ ಸಲಹೆ ನೀಡಿದರು.

ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನ ಪಿ.ಎಂ.ಚಿಕ್ಕಬೋರಯ್ಯ ಸಭಾಂಗಣದಲ್ಲಿ ಶನಿವಾರ ಪ್ರಸ್ತುತ ಶೈಕ್ಷಣಿಕ ಸಾಲಿನ ಕಾರ್ಯ ಚಟುವಟಿಕೆ ಪ್ರಾರಂಭೋತ್ಸವಕ್ಕೆೆ ಚಾಲನೆ ನೀಡಿ ಮಾತನಾಡಿದರು.

ಭಾರತದ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರು ಹೇಳಿದಂತೆ ಪ್ರತಿಯೊಬ್ಬರಿಗೂ ದೂರದೃಷ್ಟಿತ್ವ, ಕನಸು ಇರಬೇಕು. ಅದು ಹೇಗೆ ಇರುಬೇಕು ಎಂದರೆ ನಿಮ್ಮ ಕನಸನ್ನು ಬೇರೆಯವರು ಕಾಣಬಾರದು. ನಿಮ್ಮಲ್ಲಿನ ದೂರದೃಷ್ಟಿತ್ವ ಪರಿಕಲ್ಪನೆಯು ಬೇರೆಯವರಲ್ಲಿ ಮೂಡಬಾರದು. ಆಗ ಮಾತ್ರ ಯಾವುದೇ ವೃತ್ತಿಯಲ್ಲಿ ಆಗಲಿ, ಜೀವನದಲ್ಲೇ ಆಗಲಿ ಯಶಸ್ಸು ಕಾಣಬಹುದು. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಕೂಡ ನ್ಯಾಯಾಂಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ, ಹಿಂದೆ ನಿರ್ವಹಿಸಿರುವಂತಹ ಮಹನೀಯರನ್ನು ಆದರ್ಶವಾಗಿ ಇಟ್ಟುಕೊಂಡು, ಅವರ ವೃತ್ತಿ ಕೌಶಲತೆಯನ್ನು ಸ್ಫೂರ್ತಿಯಾಗಿಸಿಕೊಂಡರೆ ವೃತಿಯಲ್ಲಿ ಪ್ರವರ್ಧಮಾನಕ್ಕೆೆ ಬರಬಹುದು ಎಂದು ಹೇಳಿದರು.

ಕಾನೂನು ವಿದ್ಯಾರ್ಥಿಗಳು ಮುಂದೆ ಉತ್ತಮ ವಕೀಲರಾಗಬೇಕಾದರೆ, ಕಾನೂನು ಸಲಹೆಗಾರರಾಗಬೇಕಾದರೇ ಎಲ್ಲರೊಂದಿಗೆ ಸಂವಹನ ನಡೆಸುವುದು, ಬೆರೆಯುವುದು ಮುಖ್ಯ. ಇದರೊಂದಿಗೆ ಮಾತುಗಾರಿಕೆಯೂ ಅಗತ್ಯ. ಈ ಗುಣಗಳನ್ನು ರೂಢಿಸಿಕೊಳ್ಳಬೇಕಾದರೆ ವಿದ್ಯಾರ್ಥಿ ಜೀವನದಲ್ಲೇ ಕಲಿಯುವಿಕೆಯನ್ನು ಶುರುಮಾಡಬೇಕು. ಮೊದಲಿಗೆ ಮನೆಯಲ್ಲಿ ಇರುವ ಹಿರಿಯರು, ಅಜ್ಜಿ-ಅಜ್ಜ, ಸಹೋದರ ಸಂಬಂಧಿಗಳ ಜತೆ, ಚಿಕ್ಕ ಮಕ್ಕಳ ಜತೆ ಮಾತನಾಡಿ, ಅವರೊಂದಿಗೆ ಹರಟೆ ಹೊಡೆಯರಿ ಎಂದರು.

ವಿದ್ಯಾರ್ಥಿಗಳು ನಿಯಮಿತವಾಗಿ ಗ್ರಂಥಾಲಯಕ್ಕೆೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಅಲ್ಲಿ ಕಾನೂನು ಪುಸಕ್ತಗಳನ್ನು ಅಧ್ಯಯನ ಮಾಡಬೇಕು. ನಿತ್ಯ ಪತ್ರಿಕೆಗಳನ್ನು ಓದಬೇಕು. ಕನಿಷ್ಠ ಎರಡು ಪತ್ರಿಕೆಗಳಲ್ಲಿನ ಸಂಪಾದಕೀಯವನ್ನು ಕಡ್ಡಾಯವಾಗಿ ಓದಲೇಬೇಕು. ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆೆ ಅರಿವು ಹಾಗೂ ಕುತೂಹಲವನ್ನು ಹೊಂದಿರಬೇಕು. ಸಹಪಾಠಿಗಳ ಜತೆ, ಅಧ್ಯಾಪಕರೊಂದಿಗೆ ಪ್ರಸ್ತುತ ವಿಷಯಗಳನ್ನು ಕುರಿತು ಚರ್ಚೆ ಮಾಡಬೇಕು. ಸಂವಾದ ಮಾಡಬೇಕು. ಕೋರ್ಟ್‌ಗಳಲ್ಲಿ ನೀಡಿರುವ ತೀರ್ಪುಗಳ ಬಗ್ಗೆೆ ಗುಂಪು ಸಂವಾದಗಳನ್ನು ನಡೆಸಬೇಕು ಎಂದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ವಿಶ್ವನಾಥ್, ಪ್ರಾಂಶುಪಾಲರಾದ ಡಾ.ಪಿ.ದೀಪು, ಸಂಯೋಜಕ ಎಚ್.ಎಸ್.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net