

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಬೇಕು ಮತ್ತು ಯಾವುದೇ ಸವಾಲುಗಳಿಗೆ ಅಳುಕದೆ ಅದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಮೇಗಳಾಪುರ/ಕೀಳನಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತಮಾಡಿದರು. ಬಾಷ್ ಮತ್ತು ಇನ್ಫೋಸಿಸ್ ಸಂಸ್ಥೆ ವತಿಯಿಂದ ಸರ್ಕಾರಿ ಶಾಲೆಗಳಿಗೆ ದೊರಕಿರುವ ಸೌಲಭ್ಯಗಳನ್ನು ಎಲ್ಲರೂ ಶ್ಲಾಘಿಸಬೇಕು ಎಂದರು.
ಕೀಳನಪುರ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಇನ್ಫೋಸಿಸ್ ಸಂಸ್ಥೆ ವತಿಯಿಂದ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಾಯಿತು. ಇದರೊಂದಿಗೆ ಮೈಸೂರು ತಾಲೂಕಿನ 11 ಶಾಲೆಗಳಿಗೆ ಬಾಷ್ ಕಂಪನಿಯ ಸಿ.ಎಸ್.ಆರ್ ನಿಧಿ ಮೂಲಕ ಪೀಠೋಪಕರಣ ಹಾಗೂ ಸ್ಮಾರ್ಟ್ ಕ್ಲಾಸ್‌ಗೆ ಪೂರಕ ಸಾಮಗ್ರಿ ವಿತರಣೆ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಹಾಯಕ ‘ಸಂಜೀವಿನಿ 2.0’ ಕಲಿಕಾ ಸಾಮಗ್ರಿಯನ್ನು ವಿತರಿಸಲಾತಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್ ಮಾತನಾಡಿ, ತಾಲೂಕಿನ ಶಾಲೆಗಳಲ್ಲಿ ಶೈಕ್ಷಣಿಕ ಸೌಲಭ್ಯಗಳ ಅಭಿವೃದ್ಧಿಗೆ ಬಾಷ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ನೆರವು ನೀಡಿವೆ. ಸಿಎಸ್‌ಆರ್ ಅನುದಾನಗಳ ಮೂಲಕ ತಾಲೂಕಿನ ಶಾಲೆಗಳನ್ನು ಮಾದರಿಯಾಗಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಡಿಡಿಪಿಐ ಜವರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಸ್ವಾಮಿ, ಸದಸ್ಯ ನಾಗಣ್ಣ, ಮುಖಂಡ ಮಹದೇವಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಾಲಂಗಿ ಸುರೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿಧರ್, ಮುಖ್ಯ ಶಿಕ್ಷಕಿ ಡಾ.ಎಸ್.ಶ್ವೇತ ಇದ್ದರು.