

ವಿದ್ಯಾರ್ಥಿಗಳು ಶಿಕ್ಷಣದ ಜತೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಇಎಂಎಂಆರ್‌ಸಿ ನಿರ್ದೇಶಕಿ ಪ್ರೊ.ಸಪ್ನ ಹೇಳಿದರು.
ನಗರದ ಮಾನಸ ಗಂಗೋತ್ರಿ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದಲ್ಲಿ ಗುರುವಾರ ಆಯೋಜಿಸಿದ್ದ ಅಭಿವಿನ್ಯಾಸ ಮತ್ತು ಕೌಶಲಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ತಾನು ಪಡೆದ ಅಂಕಗಳು ಮುಖ್ಯವಲ್ಲ. ಅಂಕಗಳ ಜತೆಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಅವಕಾಶಗಳನ್ನು ಪಡೆಯಬಹುದು ಎಂದರು.
ಜೀವನದಲ್ಲಿ ಹೇಗೆ ಬದುಕುತ್ತೇವೆ ಎಂಬುದು ಬಹಳ ಮುಖ್ಯವಾಗಿದೆ. ಮಾದರಿಯಾಗಿ ಬದುಕಬೇಕು. ಸಮಾಜಕ್ಕೆ ನಮ್ಮಿಂದ ಆಗುವಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು.
ಮೈಸೂರು ವಿವಿ ಐ.ಕ್ಯೂ.ಎ.ಸಿ ನಿರ್ದೇಶಕ ಪ್ರೊ.ಅಮೃತೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಹಸಿವು ಹೆಚ್ಚಾಗಿರಬೇಕು. ಎಲ್ಲವನ್ನೂ ಕಲಿಯುವ ಶಕ್ತಿ ವಿದ್ಯಾರ್ಥಿಗಳಲ್ಲಿ ಇದೆ. ಅದನ್ನು ಮೊದಲು ತಿಳಿದುಕೊಳ್ಳಬೇಕು ಎಂದರು. ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎಸ್.ಡಿ.ಶಶಿಕಲಾ ಇದ್ದರು.