ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ತಾತ್ಸಾರ ಬೇಡ

1
Published on

ವಿದ್ಯಾರ್ಥಿಗಳು ಪರೀಕ್ಷೆಯನ್ನು ತಾತ್ಸಾರದಿಂದ ನೋಡದೆ ಪರೀಕ್ಷಾ ಘನತೆಯನ್ನು ಕಾಪಾಡಬೇಕು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ಎನ್.ನಾಗರಾಜ ಹೇಳಿದರು.

ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಪರೀಕ್ಷಾ ಸುಧಾರಣೆಗಳು’ ವಿಷಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಾಸ್ತವಿಕ ಗುರಿಗಳು, ಸಾಧಿಸಬಹುದಾದ ಗುರಿ ಮತ್ತು ಸಮಯದ ಅರಿವನ್ನು ತಿಳಿದುಕೊಳ್ಳಬೇಕು ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಗುರುವಿನ ಪಾತ್ರ ಮುಖ್ಯವಾದದ್ದು. ವಿದ್ಯಾರ್ಥಿಗಳು ಅಂಕ ಪಡೆಯುವುದರ ಜತೆಗೆ ಉತ್ತಮ ಕೌಶಲ ಬೆಳೆಸಿಕೊಳ್ಳುವುದು ಹೆಚ್ಚು ಅವಶ್ಯಕ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್ ಮಾತನಾಡಿ, ಶಿಕ್ಷಣ ಎನ್ನುವುದು ಸೋಮಾರಿಗಳ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ವಿದ್ಯಾರ್ಥಿಗಳು ಅಧ್ಯಾಪಕರ ಪಾಠ ಪ್ರವಚನಗಳನ್ನು ಚನ್ನಾಗಿ ಅರ್ಥಮಾಡಿಕೊಂಡರೆ ಪರೀಕ್ಷೆ ಸುಲಭವಾಗುತ್ತದೆ. ಗುರು ಶಿಷ್ಯರ ಸಂಬಂಧ ಶ್ರೇಷ್ಠವಾಗಿರಬೇಕು. ಅಧ್ಯಾಪಕರು ಶಿಷ್ಯರನ್ನು ಮಹತ್ವದ ಸ್ಥಾನಕ್ಕೆ ಕೊಂಡೊಯ್ದರೆ ಆಗ ಇಬ್ಬರಿಗೂ ಶ್ರೇಯಸ್ಸು ಎಂದರು.

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ಸುಧಾರಣಾ ಕೋಶದ ನಿವೃತ್ತ ಸಂಖ್ಯಾಶಾಸ್ತ್ರಜ್ಞ ಡಾ.ಎಂ.ಎನ್.ನರಸಿಂಹಮೂರ್ತಿ ಮಾತನಾಡಿ, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಪರೀಕ್ಷಾ ಪದ್ಧತಿ ಬ್ರಿಟೀಷ್‌ರಿಂದ ಬಳುವಳಿಯಾಗಿ ಬಂದದ್ದು, ನಾವು ಈ ವ್ಯವಸ್ಥೆಯನ್ನೆ ಮುಂದುವರಿಸುತ್ತಿದ್ದೇವೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಹಾಗಾಗಿ ನಾವು ಸುಧಾರಿಸಬೇಕಿದೆ. ಅಂದಿನ ದಿನಮಾನಗಳಲ್ಲಿ ಪರೀಕ್ಷೆ ನಡೆಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಇಂದು ತಂತ್ರಜ್ಞಾನದ ಕ್ರಾಂತಿಯಿಂದ ಪರೀಕ್ಷಾ ಪದ್ಧತಿ ಸಾಕಷ್ಟು ಸುಧಾರಿಸಿದೆ ಎಂದರು. ಪ್ರಾಚಾರ್ಯ ಡಾ.ರೇಚಣ್ಣ, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net