

ಶೃಂಗೇರಿ: ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನ, ವಿಜ್ಞಾನ, ಸೃಜನಶೀಲತೆ ಪ್ರಮುಖವಾದುದು. ಎಲ್ಲಿ ಜ್ಞಾನ ಇರುತ್ತದೆಯೋ ಅಲ್ಲಿ ಸಂಸ್ಕೃತಿ, ಸಂಸ್ಕಾರ ಇರುತ್ತದೆ ಎಂದು ಬಿಜಿಎಸ್ ಶಿಕ್ಷಣ ಟ್ರಸ್ಟ್‌ನ ಸಿಇಒ ಡಾ. ಕೆ.ಸಿ.ನಾಗೇಶ್ ಹೇಳಿದರು.
ಪಟ್ಟಣದ ಬಿಆರ್‌ವಿ ಮಾಡೆಲ್ ಸ್ಕೂಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಜ್ಞಾನ, ವಿಜ್ಞಾನ, ಸೃಜನಶೀಲ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ವಿಜ್ಞಾನಕ್ಕೆ ಹೆಚ್ಚಿನ ಮಹತ್ವವಿದೆ. ವಿಜ್ಞಾನ ಎಂದರೆ ಸಂಶೋಧನೆ ಮಾಡುವ ವಿಧಾನ. ಸಂಶೋಧನೆಗಳು ವಿದ್ಯಾರ್ಥಿಗಳ ಸೃಜನಶೀಲತೆ ಹೆಚ್ಚಿಸುತ್ತವೆ. ವಿದ್ಯಾರ್ಥಿಗಳಲ್ಲಿ ಹುದುಗಿರುವ ಸೃಜನಶೀಲತೆಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹ ನೀಡಿದಾಗ ಅಂತರಂಗದ ಸಾಮರ್ಥ್ಯ ಹೆಚ್ಚುತ್ತದೆ ಎಂದರು.
ಶಿವಮೊಗ್ಗ ರಾಮಕೃಷ್ಣ ವಿದ್ಯಾನಿಕೇತನ ಶಾಲೆ ಟ್ರಸ್ಟ್‌ನ ಮುಖ್ಯಸ್ಥೆ ಶೋಭಾ ಆರ್.ವೆಂಕಟರಮಣ ಮಾತನಾಡಿ, ವಿದ್ಯಾಸಂಸ್ಥೆ ಜ್ಞಾನದೇಗುಲ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಟ್ರಸ್ಟ್ ಅವಿರತವಾಗಿ ಪರಿಶ್ರಮಿಸುತ್ತಿದೆ. ಉತ್ತಮ ಶಿಕ್ಷಣದ ಜತೆಗೆ ಕ್ರಿಯಾಶೀಲತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬಿಇಒ ಎನ್.ಜಿ.ರಾಘವೇಂದ್ರ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಲ್.ತ್ಯಾಗರಾಜ್, ಸದಸ್ಯರಾದ ರಾಮೇಶ್ವರ ರಾವ್, ಖಾನಾರಾಮ್ ಪಟೇಲ್, ಸುಬ್ರಹ್ಮಣ್ಯ, ಸುರೇಶ್ ತಲಗಾರು ಇದ್ದರು.