ವಿದ್ಯಾರ್ಥಿಗಳ ಭಾಷಾ ಕೌಶಲಾಭಿವೃದ್ಧಿಗೆ ದ್ವಿಭಾಷಾ ಡಿಕ್ಷನರಿ ವಿತರಣೆ

ctd --BILINGUAL DICTIONARY DISTRIBUTION
Published on

ವಿಜಯವಾಣಿ ವಿಶೇಷ ಚಿತ್ರದುರ್ಗ

ಬಾಲ ರಕ್ಷಾಭಾರತ್ ಎನ್‌ಜಿಒ ಸಂಸ್ಥೆ, ರಾಜ್ಯಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸಹಯೋಗದೊಂದಿಗೆ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊರ ತಂದಿರುವ ಪಠ್ಯಕ್ರಮಾಧಾರಿತ ದ್ವಿಭಾಷೆ ನಿಘಂಟಗಳನ್ನು ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿ ಗಳಿಗೆ ವಿತರಿಸಲಾಗುತ್ತಿದೆ.

ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಈ ಯೋಜನೆಯಡಿ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ನೂರು ಸರ್ಕಾರಿ ಶಾಲೆಗಳ 1-8ನೇ ತರಗತಿ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾತೃ ಭಾಷೆ ಮತ್ತು ಇಂಗ್ಲೀಷ್‌ನಲ್ಲಿ ಹೊಸ ಪದಗಳನ್ನರಿಯಲು ಪಠ್ಯಕ್ರಮ ಆಧಾರಿತ ಚಿತ್ರಸಹಿತ ಕನ್ನಡ-ಇಂಗ್ಲಿಷ್ ದ್ವಿಭಾಷಾ ನಿಘಂಟನ್ನು ಪ್ರಾಥಮಿಕ ಹಂತದ 6-14 ವರ್ಷ ದೊಳಗಿನ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿದೆ.

ಒಂದರಿಂದ 5ನೇ ತರಗತಿಗೆ ಕನ್ನಡ,ಗಣಿತ,ಪರಿಸರ ಅಧ್ಯಯನ,6ರಿಂದ 8ನೇ ತರಗತಿಯ ಕನ್ನಡ,ಇಂಗ್ಲೀಷ್,ಹಿಂದಿ,ಗಣಿತ,ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನೊಳಗೊಂಡ ಪ್ರಮುಖ ಮತ್ತು ಅವಶ್ಯಕ ಪದಗಳೊಂದಿಗೆ ಸಂಪನ್ಮೂಲ ವ್ಯಕ್ತಿಗಳು ನಿಘಂಟು ಸಿದ್ಧಪಡಿಸಿದ್ದಾರೆ.

ಸದ್ಯಕ್ಕೆ ಆಯ್ದ ಜಿಲ್ಲೆಗಳ, ಆಯ್ದ ಶಾಲೆಗಳ ಹಾಗೂ ಆಯ್ದ ತರಗತಿ ವಿದ್ಯಾರ್ಥಿಗಳಿಗೆ ನಿಘಂಟುಗಳನ್ನು ವಿತರಿಸಲಾಗುತ್ತದೆ. ಇದರ ಯಶಸ್ಸನ್ನು ನೋಡಿಕೊಂಡು ರಾಜ್ಯದ ಉಳಿದೆಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಆಲೋಚನೆ ಇದೆ. ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಅನುಷ್ಠಾನಗೊಂಡಿರುವ ಈ ಯೋಜನೆ ಕರ್ನಾಟಕದಲ್ಲೂ ಜಾರಿಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಆಯ್ದ ತರಗತಿಗಳ ವಿದ್ಯಾರ್ಥಿಗಳಿಗೆ ನಿಘಂಟು(ಹಾರ್ಡ್‌ಕಾಪಿ)ವಿತರಿಸಲಾಗಿದ್ದರೂ, ಇದರ ಸಾಫ್ಟ್ ಪ್ರತಿ ಡಿಎಸ್‌ಇಆರ್‌ಟಿ ವೆ ಬ್‌ಸೈಟ್ ಠಿಠಿ//ಛ್ಟಿಠಿ.ಚ್ಟ್ಞಠಿ.ಜಟ.ಜ್ಞಿ ನಲ್ಲಿ ಲಭ್ಯವಿದೆ. ರಾಜ್ಯದ ಎಲ್ಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದನ್ನು ಬಳಸಿ ಕೊಳ್ಳಬಹುದಾಗಿದೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಕಲ್ಲಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ, ಸಿ.ಎನ್. ಮಾಳಿಗೆ ಸರ್ಕಾರಿ ಕಿರಿ ಯ ಪ್ರಾಥಮಿಕ ಶಾಲೆಯ 5ನೇ ಹಾಗೂ ಕೆ.ಸಿ.ರೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಗಳಿಗೆ ಈ ನಿಘಂಟುಗಳನ್ನು ವಿತರಿಸಲಾಗುತ್ತದೆ ಎಂದು ಡಯಟ್ ಉಪನ್ಯಾಸಕ ಯು. ಸಿದ್ದೇಶಿ ತಿಳಿಸಿದ್ದಾರೆ.

----

ಪ್ರಾಯೋಗಿಕವಾಗಿ ಅನುಷ್ಠಾನ

ರಾಜ್ಯದ ಬೆಳಗಾವಿ, ಉತ್ತರ ಕನ್ನಡ, ಮಂಡ್ಯ, ಚಿತ್ರದುರ್ಗ,ಮೈಸೂರು,ದಾವಣಗೆರೆ,ಕೋಲಾರ,ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆ, ತುಮಕೂರು ಜಿಲ್ಲೆಗಳ ಆಯ್ದ ಶಾಲೆಗಳ, ಆಯ್ದ ತರಗತಿ ವಿದ್ಯಾರ್ಥಿಗಳಿಗೆ ನಿಘಂಟು ವಿತರಣೆ ಯೋಜನೆಯನ್ನು ಪ್ರಾಯೋ ಗಿಕವಾಗಿ ಅನುಷ್ಠಾನಗೊಳಿಸಲಾಗಿದೆ.

----

ಕೋಟ್

ವಿದ್ಯಾರ್ಥಿಗಳ ಪರಿಣಾಮಕಾರಿ ಸಂವಹನಕ್ಕ ನಿಘಂಟು ಸಹಕಾರಿಯಾಗಿದೆ. ಶಬ್ಧಭಂಡಾರದ ಜ್ಞಾನ ಮಾಹಿತಿ, ಪರಿಕಲ್ಪನೆಗಳನ್ನು ಅರ್ಥೈಸಲು ಮತ್ತು ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. ಅವರ ಭಾಷಾ ಕೌಶಲಾಭಿವೃದ್ಧಿಗೂ ನೆರವಾಗಲಿದೆ.

ಎಂ. ನಾಸೀರುದ್ದೀನ್, ಪ್ರಾಚಾರ್ಯ, ಡಯಟ್,ಚಿತ್ರದುರ್ಗ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net