

ಬೆಟ್ಟದಪುರ: ಗ್ರಾಮೀಣ ಭಾಗದ ಶಾಲಾ ಮಕ್ಕಳು ವಿಶೇಷ ಪ್ರತಿಭೆಯನ್ನು ಹೊಂದಿದ್ದು, ಶೈಕ್ಷಣಿಕ ಹಂತದಲ್ಲಿ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಹೇಳಿದರು.
ಬೆಟ್ಟದಪುರ ಸಮೀಪದ ಹೊನ್ನಾಪುರ ಗ್ರಾಮದ ಜೆಕೆಟಿ ವಸತಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮಕ್ಕಳು ಶಿಕ್ಷಣದೊಂದಿಗೆ ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಿಕೊಳ್ಳುವುದಕ್ಕೆ ದೊರೆಯುವ ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮುಜುಗರಕ್ಕೆ ಒಳಗಾದರೆ ಯಾವುದೇ ರೀತಿಯ ಸಾಧನೆ ಮಾಡಲು ಆಗುವುದಿಲ್ಲ. ಕ್ರೀಡೆ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದಕ್ಕೆ ಅವಕಾಶವಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಧರ್ಮದರ್ಶಿ ಸತ್ಯನಾರಾಯಣಶೆಟ್ಟಿ, ವಾಣಿಜ್ಯೋದ್ಯಮಿಗಳಾದ ಎಸ್.ಎಂ ಶ್ರೀನಿವಾಸ್, ಕಣಗಾಲು ಚಗನ್‌ಬಾಬು, ಹೊನ್ನಾಪುರ ರೇವಣ್ಣ, ಕೊಪ್ಪ ಸೊಸೈಟಿ ನಿರ್ದೇಶಕ ಶಂಕರಪ್ಪ, ಸಾವಯವ ಕೃಷಿಕರಾದ ಕಣಗಾಲು ಕೃಷ್ಣಮೂರ್ತಿ, ಕಣಗಾಲು ಕುಳ್ಳೇಗೌಡ, ಮುಖಂಡರಾದ ದಾಸರಾಜು, ನಾರಾಯಣ್, ಮುಖ್ಯ ಶಿಕ್ಷಕ ಕುಮಾರ್‌ಸ್ವಾಮಿ, ಸಿಬ್ಬಂದಿ ಇದ್ದರು.