ವಿದೇಶಿ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ

Arrest Kaidhi
Published on

ಬೆಂಗಳೂರು: ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಮೂಲದ ಡ್ರಗ್ಸ್ ಪೆಡ್ಲರ್‌ನನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಉಜ್ವಾಮ್ ಚಿಕೆದ್ವೆಮ್ ಲಿವೋನಸ್ (೩೨) ಬಂಧಿತ. ಆರೋಪಿಯಿಂದ ೧.೫೦ ಕೋಟಿ ರೂ. ಮೌಲ್ಯದ ೧.೩ ಕೆ.ಜಿ.ಎಂಡಿಎಂಎ ಕ್ರಿಸ್ಟೆಲ್ ಮಾದವಸ್ತು, ಎಲೆಕ್ಟ್ರಾನಿಕ್ ತೂಕದ ಯಂತ್ರ, ಮೊಬೈಲ್ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಲಕ್ಕಸಂದ್ರದ ಮೈಕೋ ರೋಡ್ ಬಳಿ ವಿದೇಶಿ ಪ್ರಜೆಯೊಬ್ಬ ಗ್ರಾಹಕರಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯು ಬಿಜಿನೆಸ್ ವಿಸಾದಡಿ ಭಾರತಕ್ಕೆ ಬಂದಿದ್ದು, ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಡ್ರಗ್ಸ್ ಮಾರಾಟಕ್ಕೆ ದಂಧೆಯಲ್ಲಿ ತೊಡಗಿದ್ದ. ಮುಂಬೈ, ದೆಹಲಿ ಸೇರಿ ವಿವಿಧೆಡೆ ನೆಲೆಸಿರುವ ಪರಿಚಿತ ವಿದೇಶಿ ಡ್ರಗ್ಸ್ ಪೆಡ್ಲರ್ಸ್‌ಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ನಗರಕ್ಕೆ ತಂದು ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ.

ಈ ಹಿಂದೆ ಆರೋಪಿಯನ್ನು ಮುಂಬೈ ಪೊಲೀಸರು ಎನ್‌ಡಿಪಿಎಸ್ ಪ್ರಕರಣದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿಯು ಎರಡು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದು ಡ್ರಗ್ಸ್ ಮಾರಾಟ ದಂಧೆಯಲ್ಲಿ ತೊಡಗಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net