ವಿಡಿಯೋ ಬಿಡುಗಡೆ ಬೆದರಿಕೆ: ಪತಿಯ ವಿರುದ್ಧವೇ ದೂರು ನೀಡಿರುವ ಪತ್ನಿ

Crime Logo
Published on

ಬೆಂಗಳೂರು: ಪತ್ನಿ ಮತ್ತು ಆಕೆಯ ಪ್ರಿಯಕರನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸುತ್ತಿದ್ದ ಪತಿಯ ವಿರುದ್ಧ ಪತ್ನಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಬ್ಯಾಡರಹಳ್ಳಿ ನಿವಾಸಿಯಾದ ೨೬ ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಆಕೆಯ ಪತಿ ಪ್ರಸನ್ನ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗಮಂಗಲ ತಾಲೂಕು ಪಾಲಗ್ರಹಾರ ನಿವಾಸಿ ಪ್ರಸನ್ನ ಹಾಗೂ ಸಂತ್ರಸ್ತೆ ೮ ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ದಂಪತಿ ಲಗ್ಗೆರೆಯಲ್ಲಿ ವಾಸವಾಗಿದ್ದರು. ಇಬ್ಬರು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಪತಿ ಪ್ರಸನ್ನ, ಕುಟುಂಬ ನಿರ್ವಹಣೆಗೆ ಸಹಕರಿಸದೆ ಕ್ರಿಕೆಟ್ ಬೆಟ್ಟಿಂಗ್ ಆಡುವುದು, ಪಾನಮತ್ತನಾಗಿ ಮನೆಗೆ ಬಂದು ಹಲ್ಲೆ ಮಾಡುವುದು, ಅನುಮಾನ ಪಟ್ಟು ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಪತಿಯಿಂದ ದೂರವಾಗಿ ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದೆ. ಇದೇ ವೇಳೆ ತನ್ನ ಮಾಜಿ ಪ್ರಿಯಕರ ಅಭಿಲಾಷ್ ಜತೆ ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದು, ಬಳಿಕ ಇಬ್ಬರು ದೈಹಿಕ ಸಂಬಂಧ ಹೊಂದಿದ್ದೇವು. ಅದನ್ನು ನಾವು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದೆವು. ಆದರೆ, ತನ್ನ ಪತಿ ಪ್ರಸನ್ನ ಅವುಗಳನ್ನು ತನ್ನ ಮೊಬೈಲ್‌ಗೆ ಕಳುಹಿಸಿಕೊಂಡು, ಆತನ ಸ್ನೇಹಿತರಿಗೆ ಕಳುಹಿಸಿ ಮಾನಸಿಕ ಹಿಂಸೆ ನೀಡುತ್ತಿದ್ದ. ಜತೆಗೆ ನನಗೂ ನನ್ನ ಪ್ರಿಯಕರನಿಗೂ ಪ್ರಾಣ ಬೆದರಿಕೆ ಹಾಕಿದ್ದಾನೆ. ಅದನ್ನು ಪ್ರಶ್ನಿಸಿದಕ್ಕೆ, ನನ್ನ ಖಾಸಗಿ ವಿಡಿಯೋಗಳನ್ನು ಯುಟ್ಯೂಬ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಆರೋಪಿಯ ವಿಚಾರಣೆ ನಡೆಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net