ವಿಜೃಂಭಣೆಯ ಜೋಡಿ ರಥೋತ್ಸವ

Photo
Published on

ನಂಜನಗೂಡು: ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಯ ಜೋಡಿ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಹೊಸ ರಥ ಹಾಗೂ ಈ ಹಿಂದೆ ಬಳಸಲಾಗುತ್ತಿದ್ದ ಚಿಕ್ಕರಥಗಳಲ್ಲಿ ಶಿವಯೋಗಿಗಳ ಪಂಚಲೋಹದ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯ ನೆರೆವೇರಿಸಲಾಯಿತು. ಕಳಶಾರೋಹಣ, ಫಲ ಪುಷ್ಪಾಲಂಕಾರ, ವರ್ಣಾಲಂಕಾರಿಕ ಬಟ್ಟೆಗಳಿಂದ ಸಿಂಗರಿಸಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಧನ ಸಚಿವ ಸುನಿಲ್‌ಕುಮಾರ್, ಸುತ್ತೂರು ಶ್ರೀಗಳು ಸೇರಿದಂತೆ ಹರಗುರು ಚರಮೂರ್ತಿಗಳು ಜಯಘೋಷ ಹೇಳುವ ಮೂಲಕ ಪೂಜೆ ಸಲ್ಲಿಸಿದರು.
ನಂತರ 21 ಕುಶಾಲತೋಪು ಸಿಡಿಸಿ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಗದ್ದುಗೆ ಮುಂಭಾಗದಿಂದ ಹೊರಟ ರಥೋತ್ಸವ ಸುತ್ತೂರಿನ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಊರೊಳಗಿನ ದೊಡ್ಡಮ್ಮತಾಯಿ ದೇವಾಲಯದ ವೃತ್ತ ತಲುಪಿತು. ಸಹಸ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಪರಕಾಷ್ಠೆ ಮೆರೆದರು. ಶಿವಯೋಗಿಗಳಿಗೆ ಜೈಕಾರ ಹಾಕಿದರು. ಎರಡು ರಥಗಳಿಗೆ ಹಣ್ಣು- ಧವನ ಎಸೆದು ಭಕ್ತಿಭಾವ ತೋರಿದರು. ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ನಿಂತು ಉತ್ಸವಮೂರ್ತಿಯನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದರು.
ದೊಡ್ಡಮ್ಮತಾಯಿ ದೇವಾಲಯದ ವೃತ್ತದಿಂದ ಗದ್ದುಗೆ ಆವರಣಕ್ಕೆ ಕಲಾತಂಡಗಳ ಮೆರವಣಿಗೆ ಮೂಲಕ ವಾಪಾಸ್ ಸ್ವಸ್ಥಾನಕ್ಕೆ ಮರಳಿತು. ಅಶ್ವರೋಹಿ ತಂಡ ರಥೋತ್ಸವದ ಮುಂದೆ ಸಾಗಿ ಭಕ್ತರನ್ನು ನಿಯಂತ್ರಿಸಿದರು. ಎನ್‌ಸಿಸಿ ಕೆಡೆಟ್‌ಗಳು ಹಾಗೂ ಸ್ವಯಂ ಸೇವಕರು ಸುಗಮ ರಥೋತ್ಸವಕ್ಕೆ ಅನುವು ಮಾಡಿಕೊಟ್ಟರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ಮೆರಗು ನೀಡಿದ ಕಲಾತಂಡ
ರಥೋತ್ಸವದಲ್ಲಿ 22 ಪ್ರಕಾರದ 38 ಕಲಾ ತಂಡಗಳ ನೂರಾರು ಕಲಾವಿದರ ಕಲಾ ಪ್ರದರ್ಶನ ರಥೋತ್ಸವದ ಮೆರಗು ಹೆಚ್ಚಿಸಿತು. ಮಹಾರಾಷ್ಟ್ರದ ಎಂ.ಆರ್.ಪಾಟೀಲ್ ತಂಡದ ಜಾನಪಥಕ್ ಹಾಗೂ ತಮಿಳುನಾಡಿನ ಮುರುಗನ್ ತಂಡದ ಕೋಲಾಟ್ಟಂ, ಕರಗಟ್ಟಂ ಹಾಗೂ ಕಾವಡಿಯಾಟಂ ಪ್ರದರ್ಶನ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ನಂದಿಧ್ವಜ ಕುಣಿತ, ಮಂಗಳ ವಾದ್ಯಗೋಷ್ಠಿಯ ಸಪ್ತ ನಾದಸ್ವರ ರಥೋತ್ಸವವನ್ನು ರಂಗೇರಿಸಿತು.
ರಾಮಸಮುದ್ರದ ರಾಜು ತಂಡದ ಗೊರವರ ಕುಣಿತ, ಉಡುಪಿಯ ಸುನಿಲ್ ಭಟ್ ತಂಡದ ಚೆಂಡೆ ಬಳಗ, ಶಿವಮೊಗ್ಗದ ಯುವರಾಜ್ ತಂಡದ ಜಾಂಜ್ ಮೇಳ, ತಳಗವಾಡಿ ಹೊನ್ನಯ್ಯ ತಂಡದ ಕೊರವಂಜಿ ಕೋಲಾಟ ಪ್ರದರ್ಶನ ಮನಸೂರೆಗೊಂಡಿತು. ಸುತ್ತೂರಿನ ವೀರಮಕ್ಕಳ ಕುಣಿತ, ದೊಣ್ಣೆವರೆಸೆ ನೋಡುಗರನ್ನು ಆಕರ್ಷಿಸಿತು. ಕುಂಭಮೇಳ, ಕಂಸಾಳೆ, ಹುಲಿವೇಷಧಾರಿ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಹೊನ್ನೆಕೆರೆಯ ಮ್ಯೂಸಿಕ್ ಡ್ರಂ, ಸ್ಯಾಕ್ಸೋಫೋನ್ ವಾದನ ಕರ್ಣಾನಂದಗೊಳಿಸಿತು. ತಮಟೆ ಹಾಗೂ ನಗಾರಿ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಡೊಳ್ಳು ಕುಣಿತ ಕಲಾವಿದರ ನರ್ತನ ಕಳೆಗಟ್ಟಿಸಿತು. ತಾಯೂರಿನ ಸಿದ್ದರಾಜು ಮರಗಾಲು ಕುಣಿತದಿಂದ ಜನರ ಗಮನ ಸೆಳೆದರು. ಜೆಎಸ್‌ಎಸ್ ಉಚಿತ ಶಾಲೆಯ ಮಕ್ಕಳ ವೀರಗಾಸೆ ಕುಣಿತ, ನವಿಲು ನೃತ್ಯ, ಗಾರುಡಿ ಗೊಂಬೆ ಪ್ರದರ್ಶನ ಜನಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net