

ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ 2022ರ ಆಗಸ್ಟ್ 28 ಒಂದು ಐತಿಹಾಸಿಕ ದಿನವಾಗಿ ಉಳಿದುಕೊಳ್ಳಲಿದೆ. ದೇಶದ ರಾಜಧಾನಿಗೆ ಸಮೀಪದಲ್ಲಿರುವ ಉತ್ತರ ಪ್ರದೇಶದ ಪ್ರಮುಖ ಕೈಗಾರಿಕಾ ನಗರ ನೋಯ್ಡಾದಲ್ಲಿನ ಬೃಹತ್ ಬಹುಮಹಡಿ ಕಟ್ಟಡ ಭಾನುವಾರ ನೆಲಕ್ಕುರುಳಿತು.
ದೆಹಲಿಯ ಕುತುಬ್ ಮಿನಾರ್ಗಿಂತಲೂ ಹೆಚ್ಚು ಎತ್ತರದ ಈ ಕಟ್ಟಡವನ್ನು ಸ್ಫೋಟಕ ಬಳಸಿ ನೆಲಸಮ ಮಾಡಲಾಯಿತು. ಅಕ್ರಮವಾಗಿ ನಿರ್ಮಾಣ ಮಾಡಿದ ಕಾರಣದಿಂದಾಗಿ ಬೃಹತ್ ಬಹುಮಹಡಿ ಕಟ್ಟಡವೊಂದನ್ನು ಕೆಡವಿ ಹಾಕಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು. ಅವಳಿ ಗೋಪುರ ಎಂದೇ ಗುರುತಿಸಲಾಗಿದ್ದ ಈ ಕಟ್ಟಡ ನೆಲಸಮವಾಗಿದ್ದು ಕೇವಲ ಒಂಬತ್ತು ಸೆಕೆಂಡುಗಳಲ್ಲಿ. ಆದರೆ, ವಾಸ್ತವವಾಗಿ ಈ ಅಕ್ರಮ ಕಟ್ಟಡ ಉರುಳಲು ತಗುಲಿದ ಸಮಯ 11 ವರ್ಷ. ಇಷ್ಟೊಂದು ಸುದೀರ್ ಅವಧಿಯ ಕಾನೂನು ಹೋರಾಟದ ನಂತರ, ನೋಯ್ಡಾ ಮೂಲದ ನಿರ್ಮಾಣ ಕಂಪನಿ ಸೂಪರ್ಟೆಕ್ ಲಿಮಿಟೆಡ್ ವಿರುದ್ಧದ ಕಾನೂನು ಸಮರದಲ್ಲಿ ಎಮರಾಲ್ಡ್ ಕೋರ್ಟ್ ಕ್ಯಾಂಪಸ್ನ ನಿವಾಸಿಗಳಿಗೆ ಕೊನೆಗೂ ನ್ಯಾಯ ದೊರೆತಿದೆ. ಈ ಮೂಲಕ ನ್ಯಾಯಾಂಗದಲ್ಲಿ ಜನರ ವಿಶ್ವಾಸವರ್ಧನೆಗೂ ಈ ಪ್ರಕರಣ ಸಕಾರಾತ್ಮಕ ಕೊಡುಗೆ ನೀಡುವಂತಾಗಿದೆ.
ಈ ಅಕ್ರಮ ಕಟ್ಟಡ ವಿರುದ್ಧ ನೋಯ್ಡಾದ ಎಮೆರಾಲ್ಡ್ ಕೋರ್ಟ್ ಕ್ಯಾಂಪಸ್ ನಿವಾಸಿಗಳು ನಡೆಸಿದ ಹೋರಾಟ ಅವಿಸ್ಮರಣೀಯ. ಅಪೆಕ್ಸ್ ಮತ್ತು ಕಯೆನಾ ಎಂಬ ಅವಳಿ ಗೋಪುರ ಕಟ್ಟಡಗಳನ್ನು 2009ರಲಿ ್ಲ ಸೂಪರ್ಟೆಕ್ ಲಿಮಿಟೆಡ್ ಕಂಪನಿ ನಿರ್ಮಿಸಿತು. ಎಮೆರಾಲ್ಡ್ ಕೋರ್ಟ್ ಕ್ಯಾಂಪಸ್ನಲ್ಲಿ ಹಸಿರು ಪ್ರದೇಶಕ್ಕೆ ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ ಈ ಕಟ್ಟಡ ನಿರ್ಮಿಸುತ್ತಿದ್ದುದನ್ನು ಪ್ರಶ್ನಿಸಿ ಇಲ್ಲಿನ ನಿವಾಸಿಗಳು ಅಲಹಾಬಾದ್ ಹೈಕೋರ್ಟ್ಗೆ ಮೊರೆ ಹೋದರು. ಈ ಅಕ್ರಮ ಕಟ್ಟಡಗಳನ್ನು ಕೆಡವಲು 2014ರಲ್ಲಿ ಹೈಕೋರ್ಟ್ ಆದೇಶ ನೀಡಿದ ನಂತರ ಸೂಪರ್ಟೆಕ್ ಲಿಮಿಟೆಡ್ ಕಂಪನಿಯು ಸುಪ್ರೀಂ ಕೋರ್ಟ್ಗೆ ಪ್ರಕರಣವನ್ನು ಕೊಂಡೊಯ್ದಿತು.2021ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಅಂತಿಮವಾಗಿ ತೀರ್ಪು ನೀಡಿ, ತನ್ನ ಸ್ವಂತ ಖರ್ಚಿನಲ್ಲಿ ಹಾಗೂ ನೋಯ್ಡಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಕಟ್ಟಡ ಕೆಡವಬೇಕೆಂದು ಕಂಪನಿಗೆ ಆದೇಶಿಸಿದ್ದು ಈಗ ಕಾರ್ಯರೂಪಕ್ಕೆ ಬಂದಿದೆ.
ಪ್ರಭಾವ ಮತ್ತು ಹಣಬಲದಿಂದ ಏನಾದರೂ ದಕ್ಕಿಸಿಕೊಳ್ಳಬಹುದು ಎಂದುಕೊಂಡವರಿಗೆ ಈ ಪ್ರಕರಣ ಒಂದು ಪಾಠವಾಗಿದೆ. ಉದ್ಯಾನವನಕ್ಕೆ ಮೀಸಲಿಟ್ಟ ಹಸಿರು ಪ್ರದೇಶದಲ್ಲಿ ನಿರ್ಮಾಣಕ್ಕೆ ಮುಂದಾದ ಕಂಪನಿಯ ಜತೆಗೆ ಅಧಿಕಾರಿಗಳು ಶಾಮೀಲಾಗಿರುವುದನ್ನು ಕೋರ್ಟ್ ಎತ್ತಿತೋರಿಸಿದೆ. ಅವಳಿ ಗೋಪುರ ನಿರ್ಮಿಸಲು ನೋಯ್ಡಾ ಪ್ರಾಧಿಕಾರವು ಅನುಮತಿ ನೀಡಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ನೋಯ್ಡಾ ಪ್ರಾಧಿಕಾರ ಅನುಮತಿಸಿದ ನಕಾಶೆ ಪ್ರಕಾರ ನಿರ್ಮಾಣ ನಡೆದಿಲ್ಲ ಎಂದೇ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಹಾಗಾದರೆ, ಇಷ್ಟೊಂದು ಬೃಹತ್ ಕಟ್ಟಡ ನಿರ್ಮಾಣವಾಗುವವರೆಗೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಈ ಅಕ್ರಮದಲ್ಲಿ ಕೈಜೋಡಿಸಿದ ಅಧಿಕಾರಿಶಾಹಿಯ ಮೇಲೆಯೂ ಹೊಣೆಗಾರಿಕೆ ನಿಗದಿಪಡಿಸಿ ಸೂಕ್ತ ಕ್ರಮ ಕೈಗೊಂಡರೆ ಈ ಪ್ರಕರಣಕ್ಕೆ ಇನ್ನಷ್ಟು ನ್ಯಾಯವನ್ನು ಒದಗಿಸಿದಂತಾಗುತ್ತದೆ. ಈ ಕಟ್ಟಡ ಕೆಡವಿದ್ದರಿಂದ ತನಗೆ 500 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಸೂಪರ್ಟೆಕ್ ಲಿಮಿಟೆಡ್ ಕಂಪನಿ ಹೇಳಿದೆ. ಈ ಕಟ್ಟಡವನ್ನು ಕೆಡವುವ ಬದಲು ಸರ್ಕಾರವೇ ತನ್ನ ಸುಪರ್ದಿಗೆ ತೆಗೆದುಕೊಂಡು ಸಾರ್ವಜನಿಕವಾಗಿ ಸದ್ಬಳಕೆ ಮಾಡಿಕೊಳ್ಳಬಹುದಿತ್ತಲ್ಲವೇ ಎಂಬ ಚಿಂತನೆಗೂ ಈ ಪ್ರಕರಣ ಆಸ್ಪದ ಮಾಡಿಕೊಟ್ಟಿದೆ.