ವಿಚಾರಣೆಗೆ ಹಾಜರಾದ ಕಾಂತರಾಜು

muda scam
Published on

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮುಡಾದಲ್ಲಿ ಈ ಹಿಂದೆ ಆಯುಕ್ತರಾಗಿದ್ದ ಕಾಂತರಾಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಗುರುವಾರ ಬೆಳಗ್ಗೆ ವಿಚಾರಣೆ ನಡೆಸಿದ್ದು, ಈ ವೇಳೆ ಕೆಸರೆ ಗ್ರಾಮದ ಸರ್ವೇ ನಂ.464ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಹೊಂದಿದ್ದ 3.16 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಕಾಂತರಾಜು ಆಯುಕ್ತರಾಗಿದ್ದಾಗ ಕೈಗೊಂಡ ತೀರ್ಮಾನ ಹಾಗೂ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂತರಾಜು, ಲೋಕಾಯುಕ್ತ ಎಸ್ಪಿ ಉದೇಶ್ ಅವರು ನನ್ನ ಅವಧಿಯ ಮುಡಾ ವ್ಯವಹಾರಗಳ ಬಗ್ಗೆ ವಿಚಾರಣೆಗೆ ಕರೆದಿದ್ದರು. 2017ರಲ್ಲಿ ನಾನು ಮುಡಾ ಆಯುಕ್ತನಾಗಿದ್ದೆ. ಆಗ ಪಾರ್ವತಿ ಅವರು ಪಡೆದಿದ್ದ ಭೂಮಿ ಪರಿಹಾರದ ಬಗ್ಗೆ ವಿಚಾರಣೆ ನಡೆದಿತ್ತು. 2017ರ ಪ್ರಾಧಿಕಾರದ ಸಭೆಯಲ್ಲಿ ಅಭಿವೃದ್ಧಿಪಡಿಸದ ಭೂಮಿ ಕೊಡಲು ತೀರ್ಮಾನ ಮಾಡಿದ್ದೆವು. ಇದೆಲ್ಲದರ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದು, ತನಿಖೆ ಪ್ರಗತಿಯಲ್ಲಿ ಇರುವುದರಿಂದ ಯಾವುದನ್ನ್ನು ಹೆಚ್ಚು ಹೇಳಲಾರೆ. ಅಧಿಕಾರಿಯಾಗಿ ನನಗೂ ಕೆಲವು ನಿರ್ಬಂಧಗಳು ಇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net