ವಾಹನಗಳ ಮೇಲೆ ಆಯೋಗದ ಕಣ್ಣು!

Published on

ಬೆಳಗಾವಿ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಹಣ, ಚಿನ್ನ, ಬೆಳ್ಳಿ ಸಾಗಿಸುತ್ತಿರುವುದು ಪತ್ತೆಯಾಗುತ್ತಿರುವ ಬೆನ್ನಲ್ಲೆ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲೆ ಹೆದ್ದಾರಿಗಳ ಮೇಲೆ ಸಂಚರಿಸುವ ವಾಹನಗಳ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ.

ಹೌದು. ಬೆಳಗಾವಿ ತಾಲೂಕಿನ ಹಿರೇಬಾಗೇವಡಿ, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್‌ನಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಮಂಗಳೂರು ಕಡೆ ಹೋಗುತ್ತಿರುವ ಸಾರಿಗೆ ಬಸ್‌ನಲ್ಲಿ ಸುಮಾರು 3.50 ಕೋಟಿ ರೂ. ನಗದು ಪತ್ತೆಯಾಗಿದೆ. ಕೆಲ ಜಿಲ್ಲಾ ಮಾರ್ಗಗಳಲ್ಲಿ ಕೆಜಿಗಟ್ಟಲೇ ಚಿನ್ನ, ಬೆಳ್ಳಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಾರು, ಸಾರಿಗೆ ಬಸ್, ಲಕ್ಸುರಿ ವಾಹನ ಸೇರಿ ಎಲ್ಲ ವಾಹನಗಳ ಮೇಲೆ ಚುನಾವಣೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅನುಮಾನ ಉಂಟಾಗುವ ಎಲ್ಲ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ ಆಯೋಗವು 61 ಚೆಕ್‌ಪೋಸ್ಟ್ ನಿರ್ಮಿಸಿ ಸಿಸಿಟಿವಿ ಅಳವಡಿಸಿದೆ. ಅದರ ಬೆನ್ನಲ್ಲೆ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳು ಸೇರಿ ಇನ್ನಿತರ ತಾಲೂಕು ಮಟ್ಟದ ರಸ್ತೆಗಳಲ್ಲಿ ಸಂಚರಿಸುತ್ತಿರುವ ಸಾರಿಗೆ ಬಸ್‌ಗಳಲ್ಲಿ ಓಡಾಡುವ ಪ್ರಯಾಣಿಕರ ಮೇಲೆ ವಿಶೇಷ ಗಮನ ಹರಿಸುತ್ತಿರುವುದು ರಾಜಕೀಯ ಪಕ್ಷಗಳ ಮುಖಂಡರು, ಆಕಾಂಕ್ಷಿ ಅಭ್ಯರ್ಥಿಗಳ ನಿದ್ದೆಗೆಡಿಸಲು ಪ್ರಮುಖ ಕಾರಣವಾಗಿದೆ.

ನೆರೆಯ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯಗಳಿಂದ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಮೂಲಕ ಲಕ್ಸುರಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ. ಕೆಲವರು ಅಂತಾರಾಜ್ಯದ ಪ್ರವಾಸದ ಹೆಸರಿನಲ್ಲಿ ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಐಪಿಯ ಪ್ರತಿಯೊಂದು ವಾಹನಗಳು, ಲಕ್ಸುರಿ ಸಾರಿಗೆ ವಾಹನಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಪರಿಣಾಮ ಎರಡು ದಿನದಲ್ಲಿ ಕೋಟ್ಯಂತರ ರೂ. ನಗದು, ಚಿನ್ನ, ಬೆಳ್ಳಿ, ಇತರ ವಸ್ತುಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಈಶಾನ್ಯ, ವಾಯವ್ಯ ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಚಿಕ್ಕೋಡಿ ಸೇರಿ ವಿವಿಧ ವಿಭಾಗಗಳಿಂದ ನಿತ್ಯ 250ಕ್ಕೂ ಅಧಿಕ ಬಸ್‌ಗಳು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ವಿವಿಧ ಭಾಗಗಳಿಗೆ ಹೋಗಿ ಬರುತ್ತಿವೆ. ಈ ಬಸ್‌ಗಳನ್ನು ಗಡಿಭಾಗದ ಚೆಕ್‌ಪೋಸ್ಟ್ ಗಳಲ್ಲಿ ಎಂದಿನಂತೆ ಪರಿಶೀಲನೆ ಕಾರ್ಯ ನಡೆಯುತ್ತದೆ. ಆದರೆ, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ನಿಗಾ ವಹಿಸಿದೆ.

ಅಲ್ಲದೆ ರಾಷ್ಟ್ರೀಯ ಮತ್ತು ರಾಜ್ಯದ ಹೆದ್ದಾರಿಗಳ ಮೂಲಕ ಬೆಂಗಳೂರು ನಗರದಿಂದ ರಾಜ್ಯದ ವಿವಿಧ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಧಿಕ ಬಸ್‌ಗಳು ಓಡಾಡುತ್ತಿವೆ. ಚೆಕ್‌ಪೋಸ್ಟ್‌ಗಳಲ್ಲಿ ಸಾರಿಗೆ ಬಸ್ ಹೊರತುಪಡಿಸಿ ಎಲ್ಲ ವಾಹನಗಳನ್ನು ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆ ಕೆಲವರು ಪ್ರಯಾಣಿಕರ ಮೂಲಕ ಅಕ್ರಮ ನಡೆಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ಸಾರಿಗೆ ಬಸ್‌ಗಳ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಚೆಕ್‌ಪೋಸ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವ್ಯಾಪಾರು ವಹಿವಾಟಿನ ಮೇಲೆ ಪರಿಣಾಮ

ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಒಬ್ಬ ವ್ಯಕ್ತಿ 50 ಸಾವಿರ ರೂ. ಮೇಲ್ಪಟ್ಟ ನಗದು ತೆಗೆದುಕೊಂಡು ಹೋಗುವಂತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಿರಾಣಿ ಅಂಗಡಿಕಾರರು, ದವಸ ಧಾನ್ಯ, ತರಕಾರಿ ಸಗಟು ವ್ಯಾಪಾರಿಗಳು ಸಾರ್ವಜನಿಕರೊಂದಿಗೆ ನಗದು ರೂಪದಲ್ಲಿ ವ್ಯವಹಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕೆಲವರು ಬ್ಯಾಂಕ್‌ಗಳ ಮೂಲಕ ಹಣಕಾಸಿನ ವ್ಯವಹಾರ ನಿಲ್ಲಿಸಿದ್ದಾರೆ. ಇದರಿಂದಾಗಿ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಉಂಟಾಗಿದೆ ಎಂದು ಹೋಬಳಿ ಮಟ್ಟದ ದವಸ ಧಾನ್ಯ ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.

ಒಂದೇ ದಿನದಲ್ಲಿ ಕೋಟ್ಯಂತರ ರೂ. ಜಪ್ತಿ

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ 2 ಕೋಟಿ ರೂ. ನಗದು, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಅಂತಾರಾಜ್ಯ ಚೆಕ್‌ಪೋಸ್ಟ್‌ನಲ್ಲಿ ಮಹಾರಾಷ್ಟ್ರದ ಮುಂಬೈನಿಂದ ರಾಜ್ಯಕ್ಕೆ ಬರುತ್ತಿದ್ದ ಖಾಸಗಿ ಸಾರಿಗೆ ಬಸ್‌ನಲ್ಲಿ 1.50 ಕೋಟಿ ರೂ. ನಗದು, ಮೂಡಲಗಿ ತಾಲೂಕಿನ ಹಳ್ಳೂರಿನಲ್ಲಿ 60.47 ಲಕ್ಷ ರೂ. ಮೌಲ್ಯದ ಚಿನ್ನ, ಹುಕ್ಕೇರಿ ತಾಲೂಕಿನಲ್ಲಿ 11.49 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸಾರಿಗೆ ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net