ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

Published on

ಚಾಮರಾಜನಗರ: ಜಿಲ್ಲಾಡಳಿತ ಭವನದ ಮುಂಭಾಗ ಶ್ರೀಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಅ.17 ರಂದು ಭೂಮಿಪೂಜೆ ನೆರವೇರಿಸಬೇಕು ಎಂದು ಯಳಂದೂರು ತಾಲೂಕು ನಾಯಕರ ಸಂಘದ ಅಧ್ಯಕ್ಷ ಮುರಳಿಕೃಷ್ಣ ಆಗ್ರಹಿಸಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರೀ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲಾಡಳಿತ ತಾರತಮ್ಯ ಮಾಡುತ್ತಿದೆ. ಅದಲ್ಲದೇ ಯಳಂದೂರಿನ ಹಳೆಯ ಪಟ್ಟಣ ಪಂಚಾಯಿತಿ ಕಚೇರಿ ಜಾಗದಲ್ಲಿ ವಾಲ್ಮೀಕಿ ಪುತ್ಥಳಿ, ಗ್ರಂಥಾಲಯ ನಿರ್ಮಾಣಕ್ಕೆ ಪಟ್ಟಣ ಪಂಚಾಯಿತಿಯಲ್ಲಿ ಅನುಮೋದನೆ ಗೊಂಡಿದೆ. ಕೊಳ್ಳೇಗಾಲ ಕ್ಷೇತ್ರದ ಅಂದಿನ ಶಾಸಕ ಎನ್.ಮಹೇಶ್ ವಿಶೇಷ ಅನುದಾನದಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಇಂದಿನ ಶಾಸಕರಾದ ಎ.ಅರ್.ಕೃಷ್ಣಮೂರ್ತಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲಾಡಳಿತದ ವತಿಯಿಂದ ಅ.17 ರಂದು ನಡೆಯುವ ವಾಲ್ಮೀಕಿ ಜಯಂತಿ ದಿನದಂದು ಶಂಕುಸ್ಥಾಪನೆ ನೆರವೇರಿಸಬೇಕು. ಇಲ್ಲವಾದರೇ ಜಿಲ್ಲಾಡಳಿತ ನಡೆಸುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.\

ಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಎನ್.ಮೂರ್ತಿ, ನಾರಾಯಣಸ್ವಾಮಿ, ಕಂದಹಳ್ಳಿ ಮಹೇಶ್ ಕುಮಾರ್, ಸೂರ್ಯನಾರಾಯಣ್, ಭೀಮಪ್ಪ,ಉಮಾಶಂಕರ್, ರಂಗನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net