ವಾರ್ಡನ್ ಹುದ್ದೆಗಳ ಭರ್ತಿ ವಿಚಾರ : ಹಣಕಾಸು ಇಲಾಖೆಯ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್

highcourt
Published on

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ಅಧೀನದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್ಟಿ-ಎಸ್ಟಿ) ವಿದ್ಯಾರ್ಥಿಗಳ ಹಾಸ್ಟೆಲ್‌ನಲ್ಲಿ ಹಿರಿಯ ಮತ್ತು ಕಿರಿಯ ವಾರ್ಡೆನ್ ಹುದ್ದೆ ತುಂಬುವ ವಿಚಾರ ಸಂಬಂಧ ರಾಜ್ಯ ಹಣಕಾಸು ಇಲಾಖೆಗೆ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ರಾಜ್ಯದ ಎಸ್ಟಿ-ಎಸ್ಟಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕಲ್ಪಿಸಿರುವ ಮತ್ತು ಈ ಹಾಸ್ಟೆಲ್‌ಗಳಲ್ಲಿ ವಾರ್ಡೆನ್ ಹುದ್ದೆಗಳು ಖಾಲಿಯಿರುವ ಕುರಿತು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಈ ಹಿಂದಿನ ವಿಚಾರಣೆ ವೇಳೆ ರಾಜ್ಯದ ಎಸ್ಟಿ-ಎಸ್ಟಿ ಹಾಸ್ಟೆಲ್‌ಗಳಲ್ಲಿ ವಾರ್ಡೆನ್ ಹುದ್ದೆಗಳ ಕೊರತೆ ಸಂಬಂಧ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆಯೆ ವರದಿ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಅಗತ್ಯ ನೆರವು ಕಲ್ಪಿಸಲು ನಿಯೋಜನೆಗೊಂಡಿರುವ ಅಮೈಕಸ್ ಕ್ಯೂರಿ ವಕೀಲ ನಿತಿನ್ ರಮೇಶ್, ಪ್ರಕರಣದಲ್ಲಿ ಮೊಟ್ಟ ಮೊದಲಿಗೆ ಹಾಸ್ಟೆಲ್‌ಗಳಲ್ಲಿ ಖಾಲಿಯಿರುವ ಹಿರಿಯ ಹಾಗೂ ಕಿರಿಯ ವಾರ್ಡೆನ್‌ಗಳು ಭರ್ತಿಯಾಗಬೇಕಿದೆ. ಇಲ್ಲವಾದರೆ ಹಾಸ್ಟೆಲ್‌ಗಳಿಗೆ ಮೇಲ್ವಿಚಾರಕರೇ ಇಲ್ಲದಂತಾಗುತ್ತದೆ. ವಾರ್ಡೆನ್‌ಗಳ ಭರ್ತಿ ಪ್ರಸ್ತಾವನೆ ರಾಜ್ಯ ಹಣಕಾಸು ಇಲಾಖೆ ಮುಂದೆ ಬಾಕಿಯಿದೆ.

ರಾಜ್ಯದ ಹಲವು ನೀತಿ ಪ್ರಸ್ತಾವನೆಗಳು ಹಣಕಾಸು ಇಲಾಖೆ ಮುಂದೆ ನೆನಗುದಿಗೆ ಬಿದ್ದಿರುತ್ತವೆ. ಎಲ್ಲ ಹುದ್ದೆಗಳ ಭರ್ತಿಗೆ ಹಣಕಾಸು ಮಂಜೂರಾತಿ ಕುರಿತ ಆಕ್ಷೇಪಣೆಗಳು ಹಣಕಾಸು ಇಲಾಖೆ ಹಂತದಲ್ಲಿ ಎದುರಾಗುತ್ತವೆ ಎಂದು ವಿವರಿಸಿದರು.

ಅಲ್ಲದೆ, ಪ್ರಕರಣದಲ್ಲಿ ನೀತಿ ನಿರ್ಣಯದ ಜತೆಗೆ ಹಣಕಾಸು ನಿರ್ಣಯವೂ ಬಹಳ ಮುಖ್ಯ. ವಾರ್ಡೆನ್ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಅಗತ್ಯ ಸಹಕಾರ ಹಾಗೂ ಸಮನ್ವಯ ಸಾಧಿಸಲು ಅರ್ಜಿಯಲ್ಲಿ ಹಣಕಾಸು ಇಲಾಖೆಯ ಕಾರ್ಯದರ್ಶಿಯನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರ್ಪಡೆ ಮಾಡುವುದು ಸೂಕ್ತ ಎಂದು ನ್ಯಾಯಪೀಠಕ್ಕೆ ತಿಳಿಸಿದರು

ಈ ಸಲಹೆ ಒಪ್ಪಿದ ನ್ಯಾಯಪೀಠ, ಅರ್ಜಿಯಲ್ಲಿ ರಾಜ್ಯ ಹಣಕಾಸು ಇಲಾಖೆ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ಸೇರ್ಪಡೆಗೊಳಿಸಲು ನಿರ್ದೇಶಿಸಿತು. ಜತೆಗೆ ಹಣಕಾಸು ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಹಿರಿಯ ಹಾಗೂ ಕಿರಿಯ ವಾರ್ಡೆನ್ ಹುದ್ದೆಗಳ ಕೊರತೆ ಬಗ್ಗೆ ಸರ್ಕಾರಿ ವಕೀಲರು ವರದಿ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆ ನ.14ಕ್ಕೆ ಮುಂದೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net