

ಕೋಲಾರ: ರಾಜ್ಯ ಸರ್ಕಾರದ ಕರ್ನಾಟಕ ರೇಷ್ಮೆ ಮಂಡಳಿ (ಕೆಎಸ್‌ಎಂಬಿ) ಉತ್ತರ ಪ್ರದೇಶದ ವಾರಾಣಸಿ ಇನ್ನಿತರ ರಾಜ್ಯಗಳಲ್ಲಿ ಮಾರಾಟ ಕೇಂದ್ರ ತೆರೆಯಲು ಉದ್ದೇಶಿಸಿದೆ ಎಂದು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಆರ್.ಎಸ್.ಪೆದ್ದಪ್ಪಯ್ಯ ಹೇಳಿದರು.
ನಗರದ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗೆ ಶನಿವಾರ ಭೇಟಿ ನೀಡಿದ್ದ ಅವರು, ರೇಷ್ಮೆ ಸಚಿವ ಡಾ.ನಾರಾಯಣಗೌಡ ನ.18, 19ರಂದು ವಾರಾಣಸಿಗೆ ಭೇಟಿ ನೀಡಿ ಮಾರುಕಟ್ಟೆ ತೆರೆಯುವ ಸಂಬಂಧ ಯುಪಿ ಸರ್ಕಾರ, ರೇಷ್ಮೆ ಇಲಾಖೆ ಜತೆ ಚರ್ಚಿಸಿದ್ದು, ಕಟ್ಟಡ ನೀಡಲು ಅಲ್ಲಿನ ಸರ್ಕಾರ ಒಪ್ಪಿದೆ. ಸರ್ಕಾರದ ಜತೆಗಿನ ಒಡಂಬಡಿಕೆ ಪೂರ್ಣಗೊಂಡ ನಂತರ ಮಾರಾಟ ಕೇಂದ್ರ ತೆರೆಯಲಾಗುವುದು ಎಂದರು.
ಎಲ್ಲೆಲ್ಲಿ ವೀವರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಆ ರಾಜ್ಯಗಳಲ್ಲಿ ಮಾರಾಟ ಕೇಂದ್ರ ತೆರೆಯಲು ಉದ್ದೇಶಿಸಿದ್ದು, ಧರ್ಮಾವರಂನಲ್ಲಿ ಮುಚ್ಚಿರುವ ಕೆಎಸ್‌ಎಂಬಿ ಮಾರಾಟ ಕೇಂದ್ರ ಮರು ಆರಂಭಿಸಲು ಕ್ರಮ ವಹಿಸಲಾಗುತ್ತದೆ. ಇನ್ನಿತರೆಡೆ ಕಚ್ಚಾರೇಷ್ಮೆ ಮಾರಾಟ ಕೇಂದ್ರ ತೆರೆದು ರಾಜ್ಯದ ಬೆಳೆಗಾರರು, ರೀಲರ್ಸ್‌ಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದರು.
ತಿಂಗಳಿನಿಂದ ಶಿಡ್ಲಘಟ್ಟ, ವಿಜಯಪುರ, ಕ್ಯಾಲನೂರು, ಕೋಲಾರ, ಶ್ರೀನಿವಾಸಪುರ ಗೂಡು ಮಾರುಕಟ್ಟೆಯಲ್ಲಿ ಇ-ಪಾವತಿ ವ್ಯವಸ್ಥೆ ಚಾಲ್ತಿಗೆ ಬಂದಿದೆ. ಹೊಸ ವ್ಯವಸ್ಥೆ ಆರಂಭದಲ್ಲಿ ಸ್ವಲ್ಪ ಕಷ್ಟ ಆದರೂ ರೈತರು, ರೀಲರ್ಸ್‌ಗಳಿಗೆ ಅನುಕೂಲವಾಗಲಿದೆ ಎಂದರು.
ಅಹವಾಲು ಸ್ವೀಕಾರ: ರೇಷ್ಮೆ ಹುಳುಗಳಿಗೆ ಬಾಧಿಸುತ್ತಿರುವ ಸುಣ್ಣಕಟ್ಟು ರೋಗಕ್ಕೆ ಸೋಂಕು ನಿವಾರಕ ಒದಗಿಸಲು ರೈತರು ಕೋರಿದಾಗ ಸ್ಪಂದಿಸಿದ ಆಯುಕ್ತರು, ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ನಂತರ ಬಿಡುಗಡೆ ಮಾಡಲಾಗುವುದು ಎಂದರು.
ಇ-ಪಾವತಿ ವ್ಯವಸ್ಥೆಯಲ್ಲಿ ಬುಟ್ಟಿಗೆ 11 ಕೆಜಿ ತೂಕ ಮಿತಿಗೊಳಿಸಲಾಗಿದ್ದು, ಗೂಡು ಕಡಿಮೆ ಇದ್ದರೂ 11 ಕೆಜಿಗೆ ತೂಕ ತೆಗೆದುಕೊಳ್ಳುವುದರಿಂದ ರೀಲರ್ಸ್‌ಗಳು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಕಡಿಮೆಯಿರುವ ಲಾಟ್‌ಗಳ ತೂಕಕ್ಕೆ ಸಮಸ್ಯೆಯಾಗಿದೆ. ಗೂಡು ಖರೀದಿ ನಂತರ ಖಾತೆಯಲ್ಲಿ ಉಳಿಯುವ ಹೆಚ್ಚುವರಿ ಹಣವನ್ನು ಆ ದಿನವೇ ವಾಪಸ್ ಮಾಡಬೇಕು ಎಂದು ರೀಲರ್ಸ್ ಸಾಬೀರ್ ಪಾಷಾ ಒತ್ತಾಯಿಸಿದರು.
ಇ-ಪಾವತಿ ವ್ಯವಸ್ಥೆ ಜಾರಿಗೆ ಬಂದ ನಂತರ ಮಾರುಕಟ್ಟೆಗೆ ಆವಕ ಕಡಿಮೆಯಾಗುತ್ತಿರುವ ಬಗ್ಗೆ ಗಮನ ಸೆಳೆದಾಗ, ವಹಿವಾಟು ನಡೆಸುವ ರೈತರು, ರೀಲರ್ಸ್‌ಗಳಿಗಷ್ಟೇ ಸರ್ಕಾರದ ಯೋಜನೆಗಳಲ್ಲಿ ನೆರವು ನೀಡಲು ಚಿಂತಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕರ ಕಚೇರಿಗೆ ಆಯುಕ್ತರು ಭೇಟಿ ನೀಡಿದಾಗ ಕಚೇರಿ ಶಿಥಿಲಗೊಂಡಿರುವ ಕುರಿತು ಅಧಿಕಾರಿಗಳು ಗಮನ ಸೆಳೆದರು. ದುರಸ್ತಿಗೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ಟಿ.ಎಚ್.ಬೈರಪ್ಪ, ಉಪನಿರ್ದೇಶಕ ಟಿ.ಎಂ.ಕಾಳಪ್ಪ, ಮಾರುಕಟ್ಟೆ ಉಪನಿರ್ದೇಶಕ ರಾಧಾಕೃಷ್ಣ, ಸಹಾಯಕ ನಿರ್ದೇಶಕ ಮಂಜುನಾಥ್, ಮಾರುಕಟ್ಟೆ ಅಧಿಕಾರಿ ವಿ.ಲಕ್ಷ್ಮೀ, ರೇಷ್ಮೆ ಮಂಡಳಿ ಮಾಜಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಪ್ರದಾನ ಕಾರ್ಯದರ್ಶಿ ಶಂಕರೇಗೌಡ, ಉಪಾಧ್ಯಕ್ಷ ರಮೇಶ್, ತಾಲೂಕು ಕಾರ್ಯದರ್ಶಿ ಅಯ್ಯಪ್ಪ ಇತರರಿದ್ದರು.
ಮಳೆ ಬಂದಾಗ ಮಾರುಕಟ್ಟೆಯಲ್ಲಿ ಸಮಸ್ಯೆಯಾಗುತ್ತಿದೆ. ಕೋಲಾರ ಮತ್ತು ಕ್ಯಾಲನೂರು ಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೆ ಸಂಬಂಧಿಸಿದ ಸೋಂಕು ನಿವಾರಕ, ಬ್ಲೀಚಿಂಗ್ ಇನ್ನಿತರ ವಸ್ತುಗಳ ಮಾರಾಟಕ್ಕೆ ಮಳಿಗೆ ತೆರೆಯಲು ಅವಕಾಶ ಕಲ್ಪಿಸಬೇಕು. ನಾಗನಾಳ ಶ್ರೀನಿವಾಸ್, ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ