ವಾರಾಂತ್ಯ ಕರ್ಫ್ಯೂ ಜಾರಿ

Covid
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತಗಳು ಮೇ 4ರವರೆಗೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಸಹಿತ ವಾರಾಂತ್ಯದ ಕರ್ಫ್ಯೂ ಜಾರಿಗೆ ತಂದಿವೆ. ಪ್ರತಿದಿನದ ಮಾರ್ಗಸೂಚಿಯನ್ನೂ ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮತ್ತು ಉಡುಪಿ ಜಿಲ್ಲಾಧಿಕಾರಿ ಜಗದೀಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೊಂದಲಗಳಿಗೆ ತೆರೆ ಎಳೆದ ಡಿಸಿ: ಮೇ 4ರವರೆಗೆ ತರಕಾರಿ, ಮೀನು, ಮಾಂಸ, ಮೆಡಿಕಲ್ ಶಾಪ್‌ಗಳು, ಆಸ್ಪತ್ರೆ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಮಾತ್ರ ಅಗತ್ಯ ಸೇವೆಗಳೆಂದು ಪರಿಗಣಿಸಲಾಗುತ್ತದೆ. ಬಟ್ಟೆ, ಜುವೆಲ್ಲರಿ, ಫೂಟ್‌ವೇರ್ ವ್ಯವಹಾರಕ್ಕೆ ವೀಕೆಂಡ್ ಕರ್ಫ್ಯೂ ಮತ್ತು ಉಳಿದ ದಿನಗಳಲ್ಲಿ ಅವಕಾಶವಿಲ್ಲ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.

ವೀಕೆಂಡ್ ಹೊರತುಪಡಿಸಿ ಉಳಿದ ದಿನಗಳಲ್ಲಿ ನಿರ್ಮಾಣ ಕಾಮಗಾರಿ ಸಂಬಂಧಿಸಿ ಸಾಮಗ್ರಿಗಳ ಅಂಗಡಿಗಳು, ಕೋವಿಡ್ ನಿಯಮ ಪಾಲಿಸಿ ಸಲೂನ್, ಬ್ಯೂಟಿ ಪಾರ್ಲರ್‌ಗಳಿಗೆ ಅವಕಾಶವಿದೆ. ಆದರೆ ವೀಕೆಂಡ್ ಕರ್ಫ್ಯೂನಲ್ಲಿ ನಿರ್ಮಾಣ ಕಾಮಗಾರಿ ಸಹಿತ ಎಲ್ಲ ವ್ಯವಹಾರಗಳೂ ಬಂದ್. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ದಿನ ಬಳಕೆಯ ವಸ್ತುಗಳ ಖರೀದಿಗೆ ವೀಕೆಂಡ್ ಕರ್ಫ್ಯೂನಲ್ಲಿ ಅವಕಾಶವಿದೆ. ಜಿಲ್ಲೆಯಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರಿದ್ದಾರೆ. ಅವರ ರಕ್ಷಣೆ ನಮ್ಮ ಹೊಣೆ ಎಂದ ಡಿಸಿ, ವೀಕೆಂಡ್ ಕರ್ಫ್ಯೂ ವೇಳೆ ಹೆದ್ದಾರಿ ಬದಿಯ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಅಗತ್ಯ ಸೇವೆಗಳನ್ನು ಪೂರೈಸುವ ಲಾರಿ ಚಾಲಕರು ಹಾಗೂ ಇತರರಿಗೆ ಪಾರ್ಸೆಲ್ ಸೇವೆಗೆ ಅವಕಾಶವಿದೆ ಎಂದರು.

ಕಾಲೇಜುಗಳಿಗೆ ನೋಟಿಸ್: ಕಾಲೇಜು, ವಸತಿಯುತ ಕಾಲೇಜು ಕೊಠಡಿಗಳಲ್ಲಿ ತರಗತಿ ಅವಕಾಶ ಇಲ್ಲ. ಆಡಳಿತ ಮಂಡಳಿಗಳಿಗೆ ನೋಟಿಸ್ ನೀಡಲಾಗಿದೆ. ಇದನ್ನು ಮೀರಿ ಪಾಠ ಮಾಡುವ ದೂರು ಬಂದರೆ ಕ್ರಮ ಎಂದು ರಾಜೇಂದ್ರ ಎಚ್ಚರಿಕೆ ನೀಡಿದರು. ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ಇಲಾಖೆಯಿಂದ ವಿಶೇಷ ಅನುಮತಿಯ ಮೇರೆಗೆ ಪರೀಕ್ಷೆಗಾಗಿ ತರಗತಿ ಮಾಡಲು ಅವಕಾಶ ನೀಡಲಾಗಿದೆ. ವಿಟಿಯು ಇಂಜಿನಿಯರ್ ಕಾಲೇಜಿಗೂ ಪರೀಕ್ಷೆ ಮುಂದೂಡಲು ಪತ್ರ ಬರೆಯಲಾಗಿದೆ ಎಂದರು.

ಇಂದು, ನಾಳೆ ಸಾರಿಗೆ, ಬ್ಯಾಂಕ್, ಅಂಚೆ ಸೇವೆ ಬಂದ್: ಏ.24 ಮತ್ತು 25ರಂದು ವಾರಾಂತ್ಯ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಬಂದ್ ಆಗಲಿದೆ. ಆದರೆ ಮಂಗಳೂರು ಹಾಗೂ ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಪ್ರಯಾಣಿಕರಿದ್ದರೆ ಮಾತ್ರ ಸಂಚಾರ ಇರಲಿದೆ. ಜಿಲ್ಲೆಯಲ್ಲಿ ಖಾಸಗಿ ಟೂರಿಸ್ಟ್ ಬಸ್, ನಗರ ಸಾರಿಗೆ, ಗ್ರಾಮಾಂತರ ಸಾರಿಗೆ, ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್‌ಗಳು ಸಂಚಾರ ನಡೆಸುವುದಿಲ್ಲ. ಆದರೆ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚಾರ ಸನ್ನದ್ಧತೆಯಲ್ಲಿ ಇರಲಿವೆ. ಮಂಗಳೂರಿನಿಂದ ಮೈಸೂರು, ಬೆಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಕಾಸರಗೋಡು ಮಾರ್ಗಗಳಿಗೆ ಸಂಚಾರ ನಡೆಸಲಿದೆ. ಪುತ್ತೂರು ವಿಭಾಗದಿಂದ ಸ್ಟೇಟ್‌ಬ್ಯಾಂಕ್, ಸುಳ್ಯ, ಉಪ್ಪಿನಂಗಡಿಗಳಿಗೆ ಪ್ರಯಾಣಿಕರ ಬೇಡಿಕೆ ಅವಲಂಬಿಸಿ ಸಂಚಾರ ನಡೆಸಲಿದೆ. ರಾತ್ರಿ ಬೇಡಿಕೆ ಇದ್ದರೆ ಮಾತ್ರ ದೂರದ ಊರುಗಳಿಗೆ ಬಸ್ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾರಾಂತ್ಯ ಕರ್ಫ್ಯೂ ಕಾರಣ ಏ.24ರಂದು ಮಂಗಳೂರು ವಿಭಾಗದಲ್ಲಿ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ. ಬ್ಯಾಂಕ್‌ಗಳು ಕೂಡ ಬಂದ್ ಆಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net