

* ಅರಣ್ಯಾಧಿಕಾರಿಗಳಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ
* ಹುಲಿ ಸಾವು, ಕಾಡಾನೆ ದಂತ ನಾಪತ್ತೆ ಪ್ರಕರಣ
ಬೆಂಗಳೂರು: ಉರುಳಿಗೆ ಸಿಲುಕಿ ಹುಲಿ ಸಾವು ಹಾಗೂ ಕಾಡಾನೆಯ ದಂತ ನಾಪತ್ತೆಯಾಗಿರುವ ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಉರುಳಿಗೆ ಹುಲಿ ಸಿಲುಕಿ ಮೃತಪಟ್ಟಿರುವುದು, ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆಯ ದಂತ ನಾಪತ್ತೆ ಪ್ರಕರಣದಲ್ಲಿ ಬೇಟೆಗಾರರ ಕೈವಾಡ ಇರುವ ಅನುಮಾನ ವ್ಯಕ್ತವಾಗಿದೆ. ಇಲಾಖಾಧಿಕಾರಿಗಳ ಕರ್ತವ್ಯಲೋಪ, ಉರುಳು ಅಳವಡಿಸಿರುವವರು ಯಾರು, ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾಗಿವೆ ಎಂಬುದರ ಕುರಿತು ತನಿಖೆ ನಡೆಸಬೇಕು. ಪ್ರಾಣಿಗಳ ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಲಭ್ಯವಿರುವ ಮರಣೋತ್ತರ ಪರೀಕ್ಷೆ ನಡೆಸಿ ಪ್ರಯೋಗಾಲಯ ವರದಿ ಪರಿಗಣಿಸಬೇಕು. ಸ್ಥಳ ಪರಿಶೀಲನೆ ನಡೆಸಿ ಸಿಬ್ಬಂದಿ ಹೇಳಿಕೆ, ಗಸ್ತು ಪುಸ್ತಕ, ಚಿತ್ರ ದಾಖಲೆಗಳನ್ನು ಪರಿಶೀಲಿಸಬೇಕು. ಈ ವೇಳೆ ಯಾವುದೇ ಸಾಕ್ಷ್ಯ ನಾಶವಾಗದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಸೇರಿ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳಲ್ಲಿಯೂ ಗಸ್ತು, ಭದ್ರತಾ ವ್ಯವಸ್ಥೆ ಬಲಪಡಿಸಬೇಕು. ಅಗತ್ಯ ಕಡೆಗಳಿಗೆ ಗಸ್ತು ತಂಡಗಳನ್ನು ಹೆಚ್ಚಿಸಬೇಕು. ಸಿಬ್ಬಂದಿಯನ್ನು ಸೂಕ್ತವಾಗಿ ನಿಯೋಜಿಸುವುದು, ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ನಿಗಾ ವಹಿಸುವುದು ಹಾಗೂ ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ಖಚಿತಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಸೂಚಿಸಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲದು
ಅರಣ್ಯ ವಲಯ ಅಧಿಕಾರಿಗಳು, ಉಪ ವಲಯ ಅರಣ್ಯಾಧಿಕಾರಿಗಳು, ಬೀಟ್ ಸಿಬ್ಬಂದಿ, ಮೇಲ್ವಿಚಾರಣ ಅಧಿಕಾರಿಗಳು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಎಲ್ಲ ಡಿಸಿಎಫ್, ಎಸಿಎಫ್ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಕಚೇರಿಯಲ್ಲೇ ಕುಳಿತು ವರದಿಗಳನ್ನು ಪಡೆಯುವುದಕ್ಕೆ ಸಿಮೀತವಾಗದೆ ಅರಣ್ಯ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಗಸ್ತು ಮಾಡಬೇಕು. ಸಿಬ್ಬಂದಿಯ ನಿವೇಹಣೆ, ವನ್ಯಜೀವಿಗಳ ಸುರಕ್ಷತೆ, ಅಕ್ರಮ ಚಟುವಟಿಕೆಗಳ ನಿಯಂತ್ರಣದ ಕುರಿತು ನೇರವಾಗಿ ಪರಿಶೀಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ