ಬೆಳಗಾವಿ: ಗೋಕಾಕನ ಉದ್ಯಮಿ ರಾಜು ಝಂವರ (52) ಅವರನ್ನು ಹತ್ಯೆ ಮಾಡಿ, ಶವ ನಾಪತ್ತೆ ಮಾಡಿದ್ದ ಪ್ರಕರಣವನ್ನು ಗೋಕಾಕ ಪೊಲೀಸರು ಬೇಧಿಸಿದ್ದಾರೆ. ಕೃತ್ಯ ನಡೆದ ಸ್ಥಳದಿಂದ 10 ಕಿ.ಮೀ. ಅಂತರದಲ್ಲಿ ಪಂಚನಾಯಕನಟ್ಟಿ ಬಳಿ ಬಾವಿಯೊಂದರಲ್ಲಿ ರಾಜು ಝಂವರ ಶವ ಪತ್ತೆಯಾಗಿದೆ. ಒಂದು ವಾರದಿಂದ ಬೃಹತ್ ರಾಜ ಕಾಲುವೆ ಸುತ್ತ, ಹೊಲ ಗದ್ದೆಗಳಲ್ಲಿ ಪೊಲೀಸರು ತಿರುಗಾಡಿ ಮೃತ ಉದ್ಯಮಿ ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಶುಕ್ರವಾರ ನಸುಕಿನ ವೇಳೆ ಮೃತ ದೇಹ ಪತ್ತೆಯಾಗಿದೆ. ಕೊಲೆ ಆರೋಪದಲ್ಲಿ ಈಗಾಗಲೇ ಗೋಕಾಕ ನಗರದ ವೈದ್ಯ ಡಾ. ಸಚಿನ್ ಶಿರಗಾವಿ, ಹುಕ್ಕೇರಿ ತಾಲೂಕಿನ ಶಿರಡ್ಯಾಣದ ಅಯುರ್ವೇದ ವೈದ್ಯ ಶಿವಾನಂದ ಪಾಟೀಲ ಅವರನ್ನು ಬಂಧಿಸಲಾಗಿತ್ತು. 3ನೇ ಆರೋಪಿ ಗೋಕಾಕ ನಿವಾಸಿ, ಶಾಪಥ್ ಇರ್ಷಾದ್‌ಅಹ್ಮದ್ ತ್ರಾಸಗರ (25) ನನ್ನು ಗುರುವಾರ ಬಂಧಿಸಲಾಗಿದೆ.
ಘಟನೆ ಹಿನ್ನೆಲೆ:
ಉದ್ಯಮಿ ರಾಜು ಝಂವರ್, ಜಾಗ ಖರೀದಿಗೆ ಡಾ. ಸಚಿನ ಶಿರಗಾವಿಗೆ ಹಣ ಸಾಲ ನೀಡಿದ್ದರು. ಉದ್ಯಮಿಯು ಕೊಟ್ಟ ಹಣ ವಾಪಸ್ ಕೇಳಿದ್ದರು. ಫೆ. 10ರಂದು ರಾತ್ರಿ ಹಣ ನೀಡುತ್ತೇನೆ ಎಂದು ಆಸ್ಪತ್ರೆಗೆ ಕರೆಸಿಕೊಂಡು, ಅಲ್ಲಿಂದ ಅಮ್ಲೆಟ್ ತಿಂದು ಬರೋಣ ಎಂದು ಕರೆದುಕೊಂಡು ಹೋಗಿ ಮಾರ್ಕಂಡೇಯ ನದಿ ದಡದಲ್ಲಿ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿ ಕಾಲುವೆಗೆ ಎಸೆದಿದ್ದರು. ಅಂದಿನಿಂದಲೂ ಪೊಲೀಸರು ಪ್ರತಿದಿನ ಹುಡುಕಾಟ ನಡೆಸಿದ್ದರೂ ಶವ ಸಿಕ್ಕಿರಲಿಲ್ಲ. ಇದರಲ್ಲಿ ಶಾಪಥ್ ಕೂಡ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.