ವಾಣಿಜ್ಯ ಮಳಿಗೆ ಹರಾಜು ಶೀಘ್ರ

28 bir 1sabhe
ಬೀರೂರು ಪುರಸಭೆಯಲ್ಲಿ ವಿಶೇಷ ಸಭೆ ನಡೆಯಿತು. ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಜಿ.ಲಕ್ಷ್ಮಣ್, ಎಂ.ಪಿ.ಸುದರ್ಶನ್, ಬಿ.ಕೆ.ಶಶಿಧರ್, ರವಿ, ರಘು, ನಂದಿನಿ, ಜ್ಯೋತಿ, ಭಾಗ್ಯಲಕ್ಷ್ಮೀ, ಸಹನಾ ಇತರರಿದ್ದರು.
Published on

ಬೀರೂರು: ಪುರಸಭಾ ವ್ಯಾಪ್ತಿಯ ಕೆಲ ವಾಣಿಜ್ಯ ಮಳಿಗೆಗಳ ಹರಾಜಿಗೆ ಇದ್ದ ಕಾನೂನು ನಿರ್ಬಂಧಗಳು ನಿವಾರಣೆಯಾಗಿದ್ದು ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಮುಖ್ಯಾಧಿಕಾರಿ ಜಿ.ಪ್ರಕಾಶ್ ತಿಳಿಸಿದರು.

ಪುರಸಭೆಯಲ್ಲಿ ಬುಧವಾರ ನಡೆದ ವಿಶೇಷ ಸಭೆಯಲ್ಲಿ ವಿವಿಧ ಯೋಜನೆಗಳ ತುರ್ತು ಅನುಮೋದನೆ ಕುರಿತು ಮಾತನಾಡಿ, ವಾಣಿಜ್ಯ ಮಳಿಗೆಗಳ ಮೇಲೆ ನ್ಯಾಯಾಲಯದಿಂದ ತಂದಿದ್ದ ನಿಷೇಧಾಜ್ಞೆ ಅಂತ್ಯವಾಗಿದ್ದು ಪುರಸಭೆ ಮೊದಲ ಮಹಡಿಯಲ್ಲಿರುವ 3 ಮಳಿಗೆಗಳನ್ನು ಹೊರತುಪಡಿಸಿ ಉಳಿದ ಮಳಿಗೆಗಳನ್ನು 20 ದಿನಗಳ ಒಳಗೆ ಹರಾಜು ನಡೆಸಲಾಗುವುದು ಎಂದು ತಿಳಿಸಿದರು.

ಮೋಹನ್‌ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಹಂತದಲ್ಲಿದೆ. ಕಾವಲುಗಾರನ ಮತ್ತಿತರ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು. 3ನೇ ವಾರ್ಡ್‌ಗೆ ಪೈಪ್‌ಲೈನ್ ಅಳವಡಿಕೆಗೆ ಹೆಚ್ಚಿನ ಹಣ ಬಿಡುಗಡೆಗೊಳಿಸುವಂತೆ ಶಾರದಾ ರುದ್ರಪ್ಪ ಕೋರಿದರು. ಲೋಕೇಶಪ್ಪ ವಿವಿಧ ಸಮಸ್ಯೆಗಳ ಮಾಹಿತಿ ಜತೆ ವಾರ್ಡ್‌ನಲ್ಲಿ ನಿವೇಶನಗಳ ಒತ್ತುವರಿಯಾಗಿರುವುದನ್ನು ಗಮನಕ್ಕೆ ತಂದು ಕ್ರಮಕೈಗೊಳ್ಳಲು ತಿಳಿಸಿದರು.

ಪಟ್ಟಣದ ಭಗವತ್‌ನಗರ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಚರಂಡಿ, ರಸ್ತೆಗಳಿಲ್ಲದೆ ನಿವಾಸಿಗಳು ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮನೆಕಟ್ಟಿಕೊಳ್ಳುವವರು ಕೊಳಚೆ ನೀರನ್ನು ಎಲ್ಲಿಗೆ ಬಿಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತೆ ಮಲ್ಲಿಕಾರ್ಜುನ್ ಆಗ್ರಹಿಸಿದರು.

2025-26ನೇ ಸಾಲಿನ ಶೇ.24.10, ಶೇ.7.25 ಮತ್ತು ಶೇ.5 ಯೋಜನೆಯ ಎಸ್‌ಎ್ಸಿ ಮತ್ತು ಪುರಸಭಾ ನಿಧಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿ, 15ನೇ ಹಣಕಾಸು ಮತ್ತು ಪುರಸಭಾ ನಿಧಿಯ ವಿವಿಧ ಯೋಜನೆಯಡಿ ಕರೆದಿರುವ ಟೆಂಡರ್ ಪರಿಶೀಲಿಸಿ ಅನುಮೋದಿಸುವ ಕಾಮಗಾರಿ, ಗುತ್ತಿಗೆದಾರರ ಮಾಹಿತಿಯನ್ನು ಸಭೆಯ ಗಮನಕ್ಕೆ ತರಲಾಯಿತು.

ಕೊಳಚೆನೀರು ತೋಟಕ್ಕೆ ನುಗ್ಗುತ್ತಿರುವುದನ್ನು ತಡೆಯಲು ತುರ್ತುಕ್ರಮ, ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಕ್ರಮ, ವಿಶ್ವ ಅಂಗವಿಕಲರ ದಿನಾಚರಣೆ ಬಿಲ್ ಪಾವತಿ, ಲಕ್ಕವಳ್ಳಿ ಜಾಕ್‌ವೆಲ್‌ಗೆ ಬೀದಿದೀಪ ಅಳವಡಿಕೆ, ಪುರಸಭಾ ವ್ಯಾಪ್ತಿಯ ಪಂಪ್‌ಹೌಸ್‌ಗಳಲ್ಲಿ ಹಾಳಾಗಿರುವ ಪಂಪ್‌ಗಳ ದುರಸ್ತಿ, ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಅಡ್ಡಲಾಗಿರುವ ವಿದ್ಯುತ್ ಕಂಬ ಸ್ಥಳಾಂತರ, ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಗಳನ್ನು ಪುನಃ ಪರಿಶೀಲಿಸಿ ಪರಿಷ್ಕೃತ ಕ್ರಿಯಾಯೋಜನೆ ಮೂಲಕ ಕಾಮಗಾರಿ ನಿರ್ವಹಿಸುವ ಬಗ್ಗೆ ಚರ್ಚಿಸಲಾಯಿತು.

ಪುರಸಭಾಧ್ಯಕ್ಷೆ ವನಿತಾ ಮಧು ಬಾವಿಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮಣ್, ಎಂ.ಪಿ.ಸುದರ್ಶನ್, ಬಿ.ಕೆ.ಶಶಿಧರ್, ರವಿ, ರಘು, ನಂದಿನಿ, ಜ್ಯೋತಿ, ಭಾಗ್ಯಲಕ್ಷ್ಮೀ, ಸಹನಾ, ಮಾನಿಕ್ ಬಾಷಾ ಹಾಗೂ ನಾಮನಿರ್ದೇಶಿತ ಸದಸ್ಯರು, ಆರೋಗ್ಯಾಧಿಕಾರಿ ಜಿ.ಲಕ್ಷ್ಮಣ್, ಪರಿಸರ ಅಭಿಯಂತರ ನೂರುದ್ದಿನ್ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net