

ಹೊನ್ನಾವರ: ತಾಲೂಕಿನ ಕಾಸರಕೋಡದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಸ್ಥಳಕ್ಕೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಶುಕ್ರವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಹೊನ್ನಾವರ ಪೋರ್ಟ್ ಪ್ರೖೆವೇಟ್ ಲಿಮಿಟೆಡ್ ಕಂಪನಿ ಕಾಸರಕೋಡ ಟೊಂಕದಲ್ಲಿ ನಿರ್ವಿುಸುತ್ತಿರುವ ಖಾಸಗಿ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಹೊನ್ನಾವರ ತಾಲೂಕು ಮೀನು ವ್ಯಾಪಾರಸ್ಥರ ಸಂಘ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಜಿಲ್ಲಾಧಿಕಾರಿ ಮಾತನಾಡಿ, ‘ಹೊನ್ನಾವರ ಬಂದರು ವಿಚಾರವಾಗಿ ಹಸಿ ಮೀನು ವ್ಯಾಪಾರಸ್ಥರ ಸಂಘದವರು ಹೈಕೋರ್ಟ್ಗೆ ಮನವಿ ಹೋಗಿದ್ದು ಸ್ಥಳ ಬದಲಾವಣೆ ಆಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಣೆಯನ್ನು ಎತ್ತಿದ್ದಾರೆ. ಅದರ ಬಗ್ಗೆ ಸ್ಥಳ ನಿರ್ದಿಷ್ಟವಾಗಿ ಏನಿದೆ ಎಂದು ಸರ್ವೆ ಮಾಡಿಸಿ ವರದಿ ಸಲ್ಲಿಸಲು ಹೈಕೋರ್ಟ್ ಆದೇಶ ಕೊಟ್ಟಿದೆ. ಅದರ ಹಿನ್ನೆಲೆಯಲ್ಲಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಜಿಪಿಎಸ್ ಲೊಕೇಶನ್ ಮತ್ತು ಸ್ಥಳ ಸರ್ವೆ ಕೈಗೊಳ್ಳಲಾಗಿದ್ದು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಕಾರ್ಯ ಮಾಡಲಾಗುವುದು’ ಎಂದರು.
ಭಟ್ಕಳ ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ನಾಗರಾಜ ನಾಯ್ಕಡ್, ವಿವೇಕ ಶೇಣ್ವಿ, ಸಿಪಿಐ ಶ್ರೀಧರ ಎಸ್.ಆರ್., ಬಂದರು ಇಲಾಖೆಯ ಕ್ಯಾಪ್ಟನ್ ಸ್ವಾಮಿ, ಭೂಮಾಪನ, ಬಂದರು ಹಾಗೂ ಅರಣ್ಯ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಮೀನುಗಾರ ಮುಖಂಡರುಗಳಾದ ಚಂದ್ರಕಾಂತ ಕೊಚರೇಕರ, ವಿವನ್ ಫರ್ನಾಡೀಸ್, ರಾಜು ತಾಂಡೇಲ್, ಜಗದೀಶ ತಾಂಡೇಲ್, ಪರಿಸರವಾದಿ ಪ್ರಕಾಶ ಮೇಸ್ತ ಇತರರಿದ್ದರು.