ವಾಗ್ವಾದ ರೂಪ ಪಡೆದುಕೊಂಡ ಸಂವಾದ

Samvada
Published on

ಚಿತ್ರದುರ್ಗ: ಪತ್ರಿಕಾ ಭವನ ಮುಂಭಾಗ ಮಾದಿಗ ಸಾಂಸ್ಕೃತಿಕ ಸಂಘ ಭಾನುವಾರ ಆಯೋಜಿಸಿದ್ದ ಮಾದಿಗ ಸಮುದಾಯದ ಸಾಂಸ್ಕೃತಿಕ ನೆಲೆಗಳು ಎಂಬ ಮುಕ್ತ ಸಂವಾದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಕೊನೆಗೆ ವಾಗ್ವಾದವಾಗಿ ಬದಲಾಯಿತು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪರ-ವಿರುದ್ಧ ಬಣಗಳ ನಡುವೆ ನಡೆದ ವಾಗ್ವಾದ ತಾರಕಕ್ಕೇರಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿದ್ದ ಪೊಲೀಸರು ಮಧ್ಯ ಪ್ರವೇಶಿಸಿದರು. ಜತೆಗೆ ಹೆಚ್ಚು ಪೊಲೀಸರು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಒಂದೆಡೆ ಚಿಂತಕ ಪ್ರೊ.ಸಿ.ಕೆ.ಮಹೇಶ್ವರಪ್ಪ, ನಿವೃತ್ತ ತಹಸೀಲ್ದಾರ್ ಹಿರೇಹಳ್ಳಿ ಮಲ್ಲಿಕಾರ್ಜುನ್, ದಲಿತ ಹೋರಾಟಗಾರ ಡಿ.ದುರುಗೇಶ್, ಹನುಮಂತಪ್ಪ ದುರ್ಗ ನೇತೃತ್ವದಲ್ಲಿ ಸಂವಾದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಅಡ್ಡಿಪಡಿಸಲು ಮಾದಾರ ಚನ್ನಯ್ಯ ಗುರುಪೀಠದ ಪರವಾಗಿ ಜನರು ಜಮಾಯಿಸಿದ್ದರು. ಈ ವೇಳೆ ಕೆಲಕಾಲ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಮತ್ತೊಂದೆಡೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕೆಲವರು ಸಂವಾದವನ್ನು ಖಂಡಿಸಿ ಎಸ್‌ಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಪ್ರತಿಭಟನೆ ನಡೆಸಿದರು.

ಸಂವಾದ ಆಯೋಜಕರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಪಟ್ಟು ಹಿಡಿದರು. ಒಳಗೆ ಪ್ರವೇಶಿಸಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದರು. ಕೊನೆಗೆ ಮುಖಂಡರಾದ ಕೆ.ಟಿ.ಶಿವಕುಮಾರ್, ಇಂಗಳದಾಳ್ ರಘು, ಪ್ರಕಾಶ್ ಬೀರಾವರ, ಮಾನಪ್ಪ, ರವಿಕುಮಾರ್‌ಗೆ ಸಂವಾದ ಸ್ಥಳಕ್ಕೆ ಹೋಗಲು ಪೊಲೀಸರು ಅವಕಾಶ ಮಾಡಿಕೊಟ್ಟರು.

ಪರಿಣಾಮ ಕೆಲವೇ ಕ್ಷಣಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಗೊಂದಲದ ನಡುವೆಯೂ ಸಂವಾದ ಆರಂಭವಾಯಿತು. ಎರಡು ಗುಂಪುಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ದಿನಾಕರ್ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಘೋಷಣೆ, ಗದ್ದಲ ಹೆಚ್ಚಾದ ಕಾರಣ ಸಂವಾದ ಮುಂದೂಡುವಂತೆ ಪೊಲೀಸರು ಸಂಘಟಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net