

ಅನ್ನಭಾಗ್ಯ ಯೋಜನೆಯಡಿ ಅರ್ಹ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುತ್ತಿದ್ದು, ಮುಂದಿನ ತಿಂಗಳಲ್ಲಿ ಆಹಾರ ಧಾನ್ಯಗಳನ್ನು ಒಳಗೊಂಡ ಇಂದಿರಾ ಕಿಟ್ ವಿತರಿಸಲು ಕ್ರಮವಹಿಸಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ನಗರದ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ತೆರೆದಿರುವ ಮಳಿಗೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಬಡಜನತೆಗೆ ಪೌಷ್ಟಿಕ ಆಹಾರ ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ಅಕ್ಕಿ ಬದಲಿಗೆ ಪಡಿತರ ಕಿಟ್ ನೀಡಲಿದೆ. ರಾಜ್ಯದಲ್ಲಿ 4 ಕೋಟಿ 50 ಲಕ್ಷ ಜನ ಪಡಿತರ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.
ಇಲಾಖೆಯಿಂದ ಪಡಿತರ ಕಾರ್ಡ್‌ಗಳ ಪರಿಷ್ಕರಣೆ ನಡೆಸಲಾಗುತ್ತಿದ್ದು ಅರ್ಹರು ಒಂದು ವೇಳೆ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾಗಿದ್ದರೆ ಸಂಬಂಧಿಸಿದ ತಾಲೂಕಿನಲ್ಲಿ ತಹಸೀಲ್ದಾರ್‌ಗೆ ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಅವರು ಪರಿಶೀಲನೆ ನಡೆಸಿ ಮತ್ತೆ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮ ವಹಿಸುತ್ತಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಆಹಾರ ಬಹಳ ಮುಖ್ಯವಾಗಿದ್ದು, ಆಹಾರವನ್ನು ವ್ಯರ್ಥ ಮಾಡದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಹಾರವನ್ನು ಚೆಲ್ಲದಿರಿ. ಬಡವರಿಗೇ ಅನ್ನ ಚಿನ್ನ ಎಂದು ಹೇಳಿದರು.
ಅಂತ್ಯೋದಯ ಅಂದರೆ ಹಸಿವನ್ನು ಅಂತ್ಯ ಮಾಡುವುದು. ಆಹಾರ ನಾಗರಿಕ ಸರಬರಾಜು ಸಚಿವರಾಗಿ ಮುನಿಯಪ್ಪ ಅವರು ಬಿಪಿಎಲ್ ಅಂತ್ಯೋದಯ ಕುಟುಂಬಗಳಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಯೋಜನೆ ತಂದರು. ಅದನ್ನು ಈಗ 5 ಕೆಜಿ ಅಕ್ಕಿ ಹಾಗೂ ಉಳಿದ 5 ಕೆಜಿ ಗೆ ಇಂದಿರಾ ಕಿಟ್ ಮೂಲಕ ಬೇಳೆ, ಎಣ್ಣೆ ಅಂತಹ ಆಹಾರಧಾನ್ಯ ನೀಡಲು ಸಂಪುಟದಲ್ಲಿ ಅನುಮೋದನೆ ಪಡೆದಿದ್ದಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರವು ಪ್ರತಿಯೊಬ್ಬರಿಗೂ ಬದುಕುವ ಹಕ್ಕು ನೀಡುವ ಸಲುವಾಗಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ.ಈ ಮೂಲಕ ಪ್ರತಿ ಕುಟುಂಬಗಳಿಗೂ ಆಹಾರಧಾನ್ಯ ನೀಡುತ್ತಿದ್ದೇವೆ. ಅದರಂತೆ ಆಹಾರ ಇಲಾಖೆ ಮಳಿಗೆಯಲ್ಲಿ ಅನೇಕ ಉಪಯುಕ್ತ ಮಾಹಿತಿಗಳು ಇವೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿ ಡಾ.ಕೆ.ಎಚ್.ನಟರಾಜ್, ಜಿಲ್ಲಾ ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ, ತೂಕ ಮತ್ತು ಮಾಪನ ಇಲಾಖೆ ಅಧಿಕಾರಿ ಮಹದೇವಸ್ವಾಮಿ ಇತರರಿದ್ದರು.