ವಸ್ತುಪ್ರದರ್ಶನ ಅಭಿವೃದ್ಧಿಗೆ 20 ಕೋಟಿ ರೂ. ಬಿಡುಗಡೆ

g
Published on

ನಗರದ ವಸ್ತುಪ್ರದರ್ಶನದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 20 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕರ್ನಾಟಕ ವಸುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.

ವಸ್ತುಪ್ರದರ್ಶನದ ಅಭಿವೃದ್ಧಿಗೆ 47 ಕೋಟಿ ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ 20 ಕೋಟಿ ರೂ. ಅನುದಾನವನ್ನು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದ ವಸ್ತುಪ್ರದರ್ಶನ ಅಭಿವೃದ್ಧಿಗೆ ಮಾತ್ರವಲ್ಲದೇ ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏನೆಲ್ಲ ಅಭಿವೃದ್ಧಿ?: ವಸ್ತುಪ್ರದರ್ಶನದ ಆವರಣದ ‘ಎ’ ಬ್ಲಾಕ್ ಅನ್ನು ಹೊಯ್ಸಳರ ಹಳೇಬೀಡು ದೇವಸ್ಥಾನದ ಶಿಲ್ಪ ಕಲೆಗಳ ಶೈಲಿಯಲ್ಲಿ ನವೀಕರಣ ಮಾಡಲಾಗುತ್ತದೆ. ಎ ಬ್ಲಾಕ್‌ನಲ್ಲಿ ಒಟ್ಟು 154 ವಾಣಿಜ್ಯ ಮಳಿಗೆಗಳಿವೆ. ಇವು 20 ವರ್ಷಗಳ ಹಳೆಯ ಮಾದರಿಯಲ್ಲಿದ್ದು, ದಸರಾ ಸಮಯದಲ್ಲಿ 3 ತಿಂಗಳು ಮಾತ್ರ ಉಪಯೋಗಿಸಲಾಗುತ್ತಿದೆ. ಈ ಪ್ರದೇಶವನ್ನು ಹಳೇಬೀಡು ಶೈಲಿಯಲ್ಲಿ ಎಫ್‌ಆರ್‌ಪಿ ಬಳಸಿ ನವೀಕರಿಸಲಾಗುವುದು. ಜತೆಗೆ ಅಂತಾರಾಜ್ಯ ಹಾಗೂ ರಾಜ್ಯದ ಎಲ್ಲ ಕಲೆ ಮತ್ತು ಸಂಸ್ಕೃತಿಗಳಿಗೆ ಮೊದಲ ಆದ್ಯತೆ ನೀಡಿ ಅವಕಾಶ ಮಾಡಿಕೊಡಲಾಗುವುದು. ಇದರಿಂದ ದಸರಾ ಹೊರತುಪಡಿಸಿ, ಉಳಿದ 8 ತಿಂಗಳು ಪ್ರತಿ ತಿಂಗಳು 10 ರಿಂದ 15 ದಿನಗಳ ವಸ್ತುಪ್ರದರ್ಶನ ಆಯೋಜಿಸಿದಲ್ಲಿ ಪ್ರಾಧಿಕಾರಕ್ಕೆ ವಾರ್ಷಿಕ 1 ಕೋಟಿ ರೂ. ಆದಾಯ ಬರುತ್ತದೆ. ಇದಕ್ಕಾಗಿ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ನೀರಿನ ಕಾರಂಜಿಗಳ ಅಭಿವೃದ್ಧಿ: ಪ್ರಾಧಿಕಾರದ ಸಂಗೀತ ಮತ್ತು ಬೆಳಕಿನ ಕಾರಂಜಿ ಪ್ರಮುಖ ಆಕರ್ಷಣೆಯಾಗಿದೆ. ಇವು 20 ವರ್ಷಗಳ ಹಳೆಯದಾಗಿದ್ದು, ಕಾರ್ಯನಿರ್ವಹಿಸಲು ಯೋಗ್ಯವಾದ ಸ್ಥಿತಿಯಲ್ಲಿಲ್ಲ. ಪ್ರತಿ ವರ್ಷ ದಸರಾ ವಸ್ತುಪ್ರದರ್ಶನ ನಡೆಯುವ ಸಮಯದಲ್ಲಿ 35 ಲಕ್ಷ ರೂ. ರಿಪೇರಿ ಕಾಮಗಾರಿಗೆ ವೆಚ್ಚವಾಗುತ್ತಿದೆ. ಹೀಗಾಗಿ ಈ ಕಾರಂಜಿಗಳನ್ನು ವರ್ಷಪೂರ್ತಿ ಚಾಲ್ತಿಗೊಳಿಸಿ ಸಾರ್ವಜನಿಕರು, ಪ್ರವಾಸಿಗರನ್ನು ಆಕರ್ಷಿಸಲು 10 ಕೋಟಿ ರೂ. ವೆಚ್ಚದಲ್ಲಿ ಸಂಗೀತ ಕಾರಂಜಿ ನಿರ್ಮಿಸಲಾಗುತ್ತಿದೆ. ಪ್ರತಿ ದಿನ ಸಂಜೆ ಪ್ರವಾಸಿಗರಿಗೆ ಸಂಗೀತ ಕಾರಂಜಿ ವೀಕ್ಷಿಸಲು ಅವಕಾಶ ನೀಡಲಾಗುವುದು. ಇದರಿಂದ ಪ್ರಾಧಿಕಾರಕ್ಕೆ ವಾರ್ಷಿಕವಾಗಿ ಅಂದಾಜು 1.5 ಕೋಟಿ ರೂ. ಆದಾಯ ಬರುತ್ತದೆ. ಈ ಎರಡೂ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮಾರ್ಚ್ ಅಂತ್ಯದೊಳಗೆ ಮುಗಿಯಲಿದ್ದು, ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಿಸಿ ದಸರಾ ವೇಳೆಗೆ ಪೂರ್ಣಗೊಳಿಸಲಾಗುವುದು. ಅಲ್ಲದೆ ಜುರಾಸಿಕ್ ಪಾರ್ಕ್ ನಿರ್ಮಿಸುವ ಯೋಜನೆಯೂ ಇದೆ ಎಂದರು.

ಮಾಜಿ ಸಂಸದ ಪ್ರತಾಪಸಿಂಹ ಸ್ವದೇಶಿ ದರ್ಶನ ಯೋಜನೆಯಲ್ಲಿ ವಸ್ತುಪ್ರದರ್ಶನಕ್ಕೆ ಅನುದಾನ ಬಂದಿದೆ ಎಂದು ತಪ್ಪು ಮಾಹಿತಿ ನೀಡಿದ್ದರು. ಆದರೆ, ಇಲ್ಲಿಯವರೆಗೆ ನಯಾ ಪೈಸೆ ಅನುದಾನ ಬಂದಿಲ್ಲ. ಈ ಸಂಬಂಧ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ವಸ್ತುಪ್ರದರ್ಶನ ಸಿಇಒ ಕೆ.ರುದ್ರೇಶ್ ಮಾತನಾಡಿ, ವರ್ಷದ 365 ದಿನವೂ ವಸ್ತುಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಈಗ ಕೈಗೆತ್ತಿಕೊಂಡಿರುವ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ. ಮುಂದಿನ ವರ್ಷದ ಜನವರಿಯಿಂದ ಈ ಯೋಜನೆ ಜಾರಿಗೆ ಬರಲಿದೆ ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಅರಸು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net