

ಕೋಲಾರ: ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್ ಕುವಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ವಾಪನ ಶಾಸ್ತ್ರ ಇಲಾಖೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ಜಿಲ್ಲಾ ಗ್ರಾಹಕರ ವಾಹಿತಿ ಕೇಂದ್ರದಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿ, ವಸ್ತುಗಳ ತೂಕ, ಅಳತೆ ಹಾಗೂ ಗುಣಮಟ್ಟವನ್ನು ಖಾತರಿ ಪಡಿಸಿಕೊಂಡು ಖರೀದಿಸಬೇಕು ಎಂದರು.
ದೇಶದ ಆರ್ಥಿಕತೆ ಗ್ರಾಹಕರ ಮೇಲೆ ನಿಂತಿದೆ. ಗ್ರಾಹಕರು ವಸ್ತುಗಳನ್ನು ಖರೀದಿ ವಾಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಆದರೆ ವ್ಯಾಪಾರಿಗಳಿಂದ ಗ್ರಾಹಕರಿಗೆ ಹಲವು ಬಾರಿ ಮೋಸ ಆಗುವ ಸಾದ್ಯತೆ ಇರುತ್ತದೆ. ಒಂದು ವೇಳೆ ಮೋಸವಾದರೆ ಗ್ರಾಹಕರ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯಬಹುದು ಎಂದರು.
ವಕೀಲ ಧನರಾಜ್ ವಾತನಾಡಿ, ರೈತರಿಗೆ ನೀಡುವ ಬಿತ್ತನೆ ಬೀಜಗಳಲ್ಲಿ ನ್ಯೂನತೆ ಕಂಡುಬಂದರೆ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. ಆನ್‌ಲೈನ್ ವ್ಯವಹಾರದಲ್ಲಿ ಮೋಸ ವಾಗದಂತೆ ತಡೆಯಲು ಕೇಂದ್ರ ಸರ್ಕಾರ ಇ-ಕಾಮರ್ಸ್ ಕಾನೂನು ಜಾರಿಗೊಳಿಸಿದೆ ಎಂದರು.
ವಕೀಲ ಕೆ.ವಿ.ಸುರೇಂದ್ರ ಕುವಾರ್ ವಾತನಾಡಿ, ಹಣ ನೀಡಿ ವಸ್ತು ಮತ್ತು ಸೇವೆ ಪಡೆಯುವವರನ್ನು ಗ್ರಾಹಕರು ಎಂದು ಕರೆಯುತ್ತೇವೆ. ಖರೀದಿ ವೇಳೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಇದರಿಂದ ಮೋಸ ಉಂಟಾದರೆ ಪರಿಹಾರ ಪಡೆಯಬಹುದು. ಗ್ರಾಹಕರಿಗೆ ಮೋಸವಾದರೆ ವಸ್ತು ಖರೀದಿಸಿದ 2 ವರ್ಷದೊಳಗೆ ದೂರುಗಳನ್ನು ಗ್ರಾಹಕರ ವ್ಯಾಜ್ಯಗಳ ಆಯೋಗದಲ್ಲಿ ಸಲ್ಲಿಸಬೇಕು ಎಂದರು. ಮತದಾರರ ನೋಂದಣಿ ಕುರಿತ ಬಿತ್ತಿ ಪತ್ರಗಳನ್ನು ಬಿಡುಗಡೆ ವಾಡಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸೋಮಶಂಕರಪ್ಪ, ಕಾನೂನು ವಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಎಂ.ಪಿ.ಪ್ರಭುದೇವ್, ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ್ ಇತರರು ಇದ್ದರು.
ಪ್ರಾಧಿಕಾರದಲ್ಲಿ 3 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಪ್ರತಿಯೊಬ್ಬರಿಗೂ ಉಚಿತ ಕಾನೂನು ಸಲಹೆ ಹಾಗೂ ಸೇವೆ ನೀಡಲಾಗುತ್ತದೆ. ಮೋಸಹೋದವರು ಪ್ರಾಧಿಕಾರವನ್ನು ಸಂಪರ್ಕಿಸಿದರೆ ನೆರವು ನೀಡಲಾಗುವುದು. ಸಿ.ಎಚ್.ಗಂಗಾಧರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ