ವಸತಿ ಸೌಲಭ್ಯಕ್ಕೆ ಕಟ್ಟಡ ಕಾರ್ಮಿಕರ ಒತ್ತಾಯ

oplus_0
oplus_0
Published on

ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಪ್ರವಾಸಿ ಮಂದಿರದಿಂದ ಕೆಂಬಾವುಟ ಹಿಡಿದು ಮೆರವಣಿಗೆ ಹೊರಟ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಎಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕಳೆದ 14 ವರ್ಷಗಳಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಮಿಕರ ಭದ್ರತೆ ಹಾಗೂ ಏಳಿಗೆಗೆ ಪೂರಕ ಕೆಲಸಗಳು ಆಗುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಅನೇಕ ಯೋಜನೆಗಳ ಹೆಸರಿನಲ್ಲಿ ಮಂಡಳಿಯ ಸೆಸ್ ಹಣ ದುರುಪಯೋಗ ಪಡಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರ ಇದನ್ನು ಮುಂದುವರಿಸಬಾರದು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ವೈ. ಕುಮಾರ್ ಮಾತನಾಡಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ನೋಂದಾಯಿತ ಕಟ್ಟಡ ಕಾರ್ಮಿಕರಿಗೆ 2500 ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಬಡ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕೂಡಲೇ ಚಾಲನೆ ನೀಡಬೇಕು. ಕಟ್ಟಡ ಕಾರ್ಮಿಕರೇ ಮನೆಗಳನ್ನು ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಬೋಗಸ್ ಕಾರ್ಡ್ ರದ್ದುಗೊಳಿಸಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ, ನೋಂದಾಯಿತ ಕಟ್ಟಡ ಕಾರ್ಮಿಕರ ಶೇ.70 ರಷ್ಟು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವುದನ್ನು ಕಡಿತಗೊಳಿಸಿದ್ದು ಸರಿಯಲ್ಲ. ಕೂಡಲೇ ವಿತರಣೆಗೆ ಮುಂದಾಗಬೇಕು. ಕಾರ್ಮಿಕರ ಸಹಜ ಸಾವಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು. 5 ಸಾವಿರ ರೂ.ಗೆ ಮಾಸಿಕ ಪಿಂಚಣಿ ಏರಿಸಬೇಕು. ವೈದ್ಯಕೀಯ ಮರುಪಾವತಿಯನ್ನು ದೊಡ್ಡ ಮಕ್ಕಳಿಗೂ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು ಎಂದು ಒತ್ತಾಯಿಸಿದರು.

ನೋಂದಾಯಿತ ಸಂಘಗಳಿಗೆ ಕಟ್ಟಡ ಕಾರ್ಮಿಕರ ನೋಂದಣಿಗೆ ಆದೇಶಿಸಬೇಕು. ಸೆಸ್ ವಸೂಲಿ ಪ್ರಾಧಿಕಾರ ರಚನೆ ಮಾಡಬೇಕು. ಈ ಹಿಂದೆ ನಿರ್ಮಿಸಿದ ಕಾಮಗಾರಿಗಳ ಮೌಲ್ಯಮಾಪನಕ್ಕೆ ತಕ್ಷಣ ಅಧಿಕಾರಿಗಳನ್ನು ನೇಮಿಸಿ ಶೇ.2 ಬಡ್ಡಿ ಸಹಿತ ಸೆಸ್ ವಸೂಲಿ ಮಾಡಬೇಕು. ನೋಂದಣಿ ನವೀಕರಣ ಮಾನದಂಡ ಸರಳಗೊಳಿಸಿ 3 ವರ್ಷಕ್ಕೊಮ್ಮೆ ನವೀಕರಣಕ್ಕೆ ಆದೇಶಿಸಬೇಕು. ಮೇ 1ರಂದು ಸರ್ಕಾರಿ ಕಚೇರಿಗಳಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲು ಆದೇಶಿಸಿ, ನುರಿತ ಕಾರ್ಮಿಕರನ್ನು ಸನ್ಮಾನಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಸುಮಾರು 15 ಸಾವಿರ ನೋಂದಾಯಿತ ಟೈಲ್ಸ್ ಕಾರ್ಮಿಕರಿದ್ದಾರೆ, ಇವರಿಗೆ ಮಂಡಳಿಯಿಂದ ಟೈಲ್ಸ್ ಮತ್ತು ಗ್ರಾನೈಟ್ ಕಿಟ್ ನೀಡುವಂತೆ ಜಿಲ್ಲಾ ಟೈಲ್ಸ್ ಮತ್ತು ಗ್ರಾನೈಟ್ ಕಾರ್ಮಿಕರ ಸಂಘದ ಅಧ್ಯಕ್ಷ ಟಿ. ಚಂದ್ರಪ್ಪ ಇತರರು ಮನವಿ ಮಾಡಿದರು.

ಸಂಘದ ರಾಜ್ಯಾಧ್ಯಕ್ಷ ಜೆ. ಮಂಜುನಾಥ್, ಉಪಾಧ್ಯಕ್ಷ ಕೆ. ಗೌಸ್‌ಪೀರ್, ಖಜಾಂಚಿ ಡಿ. ಈಶ್ವರಪ್ಪ, ಪದಾಧಿಕಾರಿಗಳಾದ ಚಾಂದ್‌ಪೀರ್, ಇಬಾದುಲ್ಲಾ, ವೈ. ಬಸವರಾಜ್, ನಾದಿ ಅಲಿ, ಸಲೀಂ, ರಾಜಪ್ಪ, ಮಾಯಣ್ಣ ಇತರರು ಭಾಗವಹಿಸಿದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net