ವಸತಿ ಮಂಜೂರು ಆದೇಶ ಪತ್ರ ವಿತರಣೆ

15HAN-3
Published on

ಹನಗೋಡು: ಹೋಬಳಿಯ ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆಗೆ ಕಾರ್ಯಕ್ರಮದಲ್ಲಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಕ್ಕರೆ, ಹಲವು ಸಮಸ್ಯೆಯನ್ನು ಕಾಲಮಿತಿಯೊಳಗೆ ಪರಿಹರಿಸುವಂತೆ ಶಾಸಕ ಎಚ್.ಪಿ. ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದಲ್ಲಿ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಫಲಾನುಭವಿಗಳಿಗೆ ವಸತಿ ಮಂಜೂರು ಆದೇಶ ಪತ್ರ, ಬ್ಯಾಂಕ್ ಪಾಸ್‌ಪುಸ್ತಕ, ಆಧಾರ್‌ಕಾರ್ಡ್, ಮಾಸಾಶನ ಆದೇಶ ಪತ್ರಗಳನ್ನು ಆದಿವಾಸಿಗಳಿಗೆ ವಿತರಿಸಿ ಮಾತನಾಡಿದರು.

ಆಯುಷ್ಮಾನ್ ಆರೋಗ್ಯ ಕಾರ್ಡ್, ಮತದಾರ ಪಟ್ಟಿ ಸೇರ್ಪಡೆ, ಆದಾಯ-ಜಾತಿ ದೃಢೀಕರಣ ಪತ್ರ, ಪೌತಿ ಖಾತೆ, ರಸ್ತೆ, ಓಣಿ ಒತ್ತುವರಿ, ಬಸ್, ವಿದ್ಯುತ್, ಮಾಸಾಶನ ಸಮಸ್ಯೆ, ಭೂಮಿ, ಸ್ಮಶಾನ ಜಾಗ ಸಮಸ್ಯೆ ಸೇರಿದಂತೆ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ, ಆಧಾರ್‌ಕಾರ್ಡ್ ಮಂಜೂರು-ತಿದ್ದುಪಡಿ, ಪಡಿತರ ಕಾರ್ಡ್ ಹೀಗೆ ಹತ್ತು ಹಲವು ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಇನ್ನುಳಿದಂತೆ ಕಾಲಮಿತಿಯೊಳಗೆ ಇತರ ಸಮಸ್ಯೆಗೆ ಸ್ಪಂದಿಸಲಾಗುವುದು, ಕೆಲವನ್ನು ಗ್ರಾಪಂ ವತಿಯಿಂದಲೇ ಬಗೆಹರಿಸಬಹುದಾಗಿದ್ದು, ಪಿಡಿಒಗಳು ಪಟ್ಟಿ ಮಾಡಿಕೊಂಡು ವಿವಿಧ ಯೋಜನೆಯಡಿ ಮಂಜೂರಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.

ರಸ್ತೆಗಳ ಅಭಿವೃದ್ಧಿಗೆ ಕ್ರಮ: ನಾಗಪುರ ಗಿರಿಜನ ಪುನರ್ವಸತಿ ಕೇಂದ್ರದ 3 ರಸ್ತೆಗಳಿಗೆ ತಲಾ ಹತ್ತು ಲಕ್ಷ ರೂ. ವೆಚ್ಚದಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ 30 ಲಕ್ಷ ರೂ. ಅನುದಾನ ನೀಡಿದ್ದೇನೆ. ಮಳೆ ನಿಂತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ನೇರಳಕುಪ್ಪೆಯಲ್ಲಿ ಕಾರ್ಯಕ್ರಮ: ಮುಂದಿನ ತಿಂಗಳ ಕಾರ್ಯಕ್ರಮವನ್ನು ಕಾಡಂಚಿನ ನೇರಳಕುಪ್ಪೆ ಹಾಗೂ ಕಡೆಮನುಗನಹಳ್ಳಿ ಗ್ರಾಪಂ ವ್ಯಾಪ್ತಿಯ ಮೂಲ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಲು ನೇರಳಕುಪ್ಪೆಯಲ್ಲಿ ಹಮ್ಮಿಕೊಳ್ಳಲು ಶಾಸಕರು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ.

ತಹಸೀಲ್ದಾರ್ ಲೆಪ್ಟಿನೆಂಟ್ ಕರ್ನಲ್ ಡಾ.ಅಶೋಕ್, ತಾಪಂ ಇಒ ಬಿ.ಕೆ.ಮನು, ಜಿಲ್ಲಾ ಐಟಿಡಿಪಿ ಆಧಿಕಾರಿ ಪ್ರಭಾ ಅರಸ್, ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷ ಮುದಗನೂರು ಸುಭಾಷ್, ಗುರುಪುರ ಗ್ರಾಪಂ ಅಧ್ಯಕ್ಷೆ ರಾಧಮ್ಮ ನಾಗನಾಯಕ, ಜಿಪಂ ಮಾಜಿ ಸದಸ್ಯ ಕಟ್ಟನಾಯ್ಕ, ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್, ಬಿಆರ್‌ಸಿ ಸಂತೋಷ್ ಕುಮಾರ್, ತಾಲೂಕು ಪರಿಶಿಷ್ಟ ವರ್ಗಗಳ ಅಧಿಕಾರಿ ಬಸವರಾಜ್, ವಸತಿ ನೋಡಲ್ ಅಧಿಕಾರಿ ಲೋಕೇಶ್, ಆರ್‌ಎಫ್‌ಒ ನಮನ್ ನಾರಾಯಣ ನಾಯಕ್, ಡಿಆರ್‌ಎಫ್‌ಒ ಚಂದ್ರೇಶ್, ಗ್ರಾಪಂ ಸದಸ್ಯರಾದ ಭರತವಾಡಿ ವೆಂಕಟೇಶ್, ಪ್ರಶಾಂತ್, ಉಪ ತಹಸೀಲ್ದಾರ್ ಚೆಲುವರಾಜು ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net