

ಬೆಂಗಳೂರು : ವಸತಿ ಪ್ರದೇಶದಲ್ಲಿ ರಾಸಾಯನಿಕ ತಯಾರಿಕ ಘಟಕ ಅಥವಾ ಗೋದಾಮುಗಳ ಸರ್ವೆ ನಡೆಸಿ ದಾಖಲೆ ಪರಿಶೀಲಿಸುವಂತೆ ಠಾಣೆಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚಿಸಿದ್ದಾರೆ.
ಮೈಸೂರು ರಸ್ತೆ ಹೊಸಗುಡ್ಡದಹಳ್ಳಿಯ ರಾಸಾಯನಿಕ ಗೋದಾಮಿನಲ್ಲಿ ನಡೆದ ಅಗ್ನಿ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಕಮಲ್ ಪಂತ್, ಇಂತಹ ಅಗ್ನಿ ಅವಘಡ ಮರುಕಳಿಸದಂತೆ ಎಚ್ಚರಿಕೆ ವಹಿಸಿದ್ದಾರೆ. ನಗರದ ವಸತಿ ಪ್ರದೇಶಗಳಲ್ಲಿ ಮತ್ತು ಲೇಔಟ್‌ಗಳಲ್ಲಿ ರಾಸಾಯನಿಕ ಕಾರ್ಖಾನೆಗಳು ಅಥವಾ ಗೋದಾಮು ಇದ್ದರೇ ಗುರುತಿಸಬೇಕು. ಅಲ್ಲದೆ, ದಾಖಲೆ ಪರಿಶೀಲನೆ ನಡೆಸಿ ಕಾನೂನು ಬಾಹಿರವಾಗಿ ನಡೆಸುತ್ತಿದ್ದರೇ ಬಿಬಿಎಂಪಿ, ಕೈಗಾರಿಕಾ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಠಾಣೆಯ ತಮ್ಮ ಬೀಟ್‌ಗಳಲ್ಲಿ ಕಾರ್ಯನಿರ್ವಹಿಸುವ ಗಸ್ತು ಪೊಲೀಸರು ತಮ್ಮ ಪ್ರದೇಶಗಳಲ್ಲಿ
ರಾಸಾಯನಿಕ ಕಾರ್ಖಾನೆಗಳು ಇದೆಯೇ ಎಂಬುದರ ಬಗ್ಗೆ ತಮ್ಮ ಇನ್‌ಸ್ಪೆಕ್ಟರ್‌ಗಳಿಗೆ ಮಾಹಿತಿ ನೀಡಬೇಕು. ಈ ಪಟ್ಟಿಯನ್ನು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಕಳುಹಿಸಬೇಕು. ಅಕ್ರಮ ಎಂದು ಕಂಡುಬಂದರೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ವಸತಿ ಪ್ರದೇಶ ಅಥವಾ ನಿಮ್ಮ ಸುತ್ತಮುತ್ತಲು ಅನುಮಾನಾಸ್ಪದ ಗೋದಾಮು ಕಂಡು ಬಂದರೆ ಮಾಹಿತಿ ನೀಡಿ, ಬೆಂಕಿ ಅವಘಡ ತಡೆಯಲು ಸಹಕರಿಸುವಂತೆ ಕಮಲ್ ಪಂತ್ ಸಾರ್ವಜನಿಕರಿಗೂ ಮನವಿ ಮಾಡಿದ್ದಾರೆ.