

ಕೆಂಭಾವಿ: ಪಟ್ಟಣದ ಪುರಸಭೆಗೆ ವ್ಯಾಪ್ತಿಗೆ ಒಳಪಡುವ ಅಧಿಕೃತ ನಿವೇಶನದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಗುರುವಾರ ಪುರಸಭೆ ಅಧ್ಯಕ್ಷ ರಹೆಮಾನ್ ಪಟೇಲ್ ಯಲಗೋಡ ಹಾಗೂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ಕನ್ನಡ ಭಾಷೆ ಉಳಿವಿಗಾಗಿ ಮತ್ತು ಸಾಹಿತ್ಯದ ಬೆಳವಣಿಗೆಗಾಗಿ ಕೆಂಭಾವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯಕ್ಕೆ ಇಲ್ಲಿ ತನ್ನದೆ ವಿಶಿಷ್ಠ ಇತಿಹಾಸವಿದ್ದು, ಅನೇಕ ಹಿರಿಯ ಸಾಹಿತಿಗಳು, ಕವಿಗಳು ನಿರಂತರ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ವಲಯ ಕಸಾಪಕ್ಕೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಮುಖ್ಯಾಧಿಕಾರಿ ಮಹ್ಮದ್ ಯುಸೂಫ್, ಈ ವಿಷಯ ಸಭೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಪುರಸಭೆ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಆಶ್ರಯ ಸಮಿತಿ ಅಧ್ಯಕ್ಷ ಶರಣಬಸ್ಸು ಡಿಗ್ಗಾವಿ, ಹಿರಿಯ ಸಾಹಿತಿ ಡಾ. ಯಂಕನಗೌಡ ಪಾಟೀಲ, ಸಂಜೀವರಾವ ಕುಲಕರ್ಣಿ, ವಲಯ ಕಸಾಪ ಪದಾಧಿಕಾರಿಗಳಾದ ಮಹಿಪಾಲರೆಡ್ಡಿ ಡಿಗ್ಗಾವಿ, ಗುಂಡಭಟ್ಟ ಜೋಷಿ, ಬಂದೇನವಾಜ ನಾಲತವಾಡ, ವಿಜಯಾಚಾರ್ಯ ಪುರೋಹಿತ, ಮಲ್ಲನಗೌಡ ಪಾಟೀಲ್, ರಂಗಪ್ಪ ವಡ್ಡರ್ ಇತರರಿದ್ದರು.