

ತಿ.ನರಸೀಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಕಾ.ಪು.ಸಿದ್ದಲಿಂಗಸ್ವಾಮಿ ಹೇಳಿದರು.
ಕಳೆದ ಬಾರಿ ರಾಜಕೀಯ ಗೊಂದಲಗಳಿಂದ ಸ್ಪರ್ಧೆಯಲ್ಲಿ ಏರುಪೇರಾಯಿತು. ಈ ಬಾರಿ ಕ್ಷೇತ್ರದ ಜನರ ಅಭಿಪ್ರಾಯದೊಂದಿಗೆ ಸ್ಪರ್ಧಿಸಬೇಕೆಂಬ ಆಶಯವಿದೆ. ಅವಕಾಶ ನೀಡುವಂತೆ ರಾಜ್ಯ ಮತ್ತು ರಾಷ್ಟ್ರ ನಾಯಕರಲ್ಲಿ ಮನವಿ ಮಾಡಿರುವುದಾಗಿ ಪಟ್ಟಣದಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕ್ಷೇತ್ರದ ಜನ ಒತ್ತಾಯ ಮಾಡಿದ್ದಾರೆ. ಜನರ ಜತೆ ಸಂಪರ್ಕವಿದ್ದು, ಕಷ್ಟ, ಸುಖಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ನರೇಂದ್ರ ಮೋದಿ ಹಾಗೂ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಜನೋಪಯೋಗಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆ ಎದುರಿಸಲಾಗುವುದು. ಕಾಂಗ್ರೆಸ್ ಜೋಡೋ ಯಾತ್ರೆಯಿಂದ ಬಿಜೆಪಿಗೆ ತೊಂದರೆ ಇಲ್ಲ. ದೇಶವನ್ನು ಒಡೆದ ಕಾಂಗ್ರೆಸ್ ಈಗ ಭಾರತ್ ಜೋಡೋ ಮಾಡುವ ಮೂಲಕ ಏನನ್ನು ಜೋಡಿಸಲು ಹೊರಟಿದ್ದಾರೋ ಗೊತ್ತಿಲ್ಲ ಎಂದರು.
ಪುರಸಭೆ ಸದಸ್ಯರಾದ ಎಸ್.ಕೆ.ಕಿರಣ್, ಕೆ.ಗಣೇಶ್, ಮಿಥುನ್, ವೆಂಕಟರಮಣ ಶೆಟ್ಟಿ, ಚಿನ್ನಂಬಳ್ಳಿ ಮಂಜುನಾಥ್, ಡಣಾಯಕನ ಪುರ ಮಹದೇವಪ್ಪ, ಕಾರೇಪುರ ಜಗದೀಶ್, ಬೋಗಯ್ಯನಹುಂಡಿ ಪ್ರಭುಸ್ವಾಮಿ ಇದ್ದರು.