ವರಿಷ್ಠರು ಬೇಡವೆಂದರೂ ಬಿಜೆಪಿ ಪರ ಕೆಲಸ

bjp-chamarajanagara-v.somanna
Published on

ಚಿತ್ರದುರ್ಗ: ವರಿಷ್ಠರು ಸ್ಪರ್ಧೆ ಇಂದೇ ಬೇಡವೆಂದರೂ, ಯಾರಿಗೆ ಟಿಕೆಟ್‌ ನೀಡಿದರೂ ಬಿಜೆಪಿ ಅಭ್ಯರ್ಥಿ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಸ್ಪಷ್ಟಪಡಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಡೀ ವಿಶ್ವದ ಜನ ಪ್ರಧಾನಿ ನರೇಂದ್ರಮೋದಿ ಅವರ ಕರ್ತವ್ಯ ನಿಷ್ಠೆ ಮೆಚ್ಚಿದ್ದಾರೆ. ಭಾರತವನ್ನು ಯಾವ ರೀತಿ ಮುನ್ನಡೆಸಬೇಕು ಎಂಬುದಕ್ಕೆ ಅವರ 10 ವರ್ಷದ ಕಾರ್ಯವೈಖರಿ ಸಾಕ್ಷಿಯಾಗಿದೆ. ಅವರ ಸಾಧನೆ ಒಪ್ಪಿರುವ ದೇಶದ 142 ಕೋಟಿ ಜನ ಮೂರನೇ ಬಾರಿ ಪ್ರಧಾನಿಯಾಗಿಸಲು ಸಿದ್ಧರಿದ್ದಾರೆ ಎಂದರು.

ಹೊರಗಿನವರು ಎಂಬುದು ಮುಖ್ಯವಲ್ಲ. ಜನ ಎಷ್ಟರಮಟ್ಟಿಗೆ ಆದ್ಯತೆ ನೀಡುತ್ತಾರೆನ್ನುವುದನ್ನು ಗಮನಿಸಬೇಕಿದೆ. 45 ವರ್ಷದಿಂದ ರಾಜಕೀಯದಲ್ಲಿದ್ದು, ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನೂ ತುಮಕೂರು ಕ್ಷೇತ್ರದಲ್ಲೇ ನಿಲ್ಲಬೇಕೆಂಬುದು ವರಿಷ್ಠರ ತೀರ್ಮಾನ. 50 ವರ್ಷದಿಂದ ಜಿಲ್ಲೆಯ ಜನರೊಂದಿಗೆ ಒಡನಾಟವಿದೆ. ವಿಶ್ವಮಟ್ಟದಲ್ಲಿ ಬೆಳೆದಿರುವ ಅಲ್ಲಿನ ಸಿದ್ಧಗಂಗಾ ಕ್ಷೇತ್ರದೊಂದಿಗೂ ಅವಿನಾಭಾವ ಸಂಬಂಧವಿದೆ. ಅಳಿಲು ಸೇವೆ ಮಾಡಿರುವ ಸಂತೃಪ್ತಿಯೂ ಇದೆ ಎಂದರು.

ಮಾಜಿ ಸಚಿವ ಮಾಧುಸ್ವಾಮಿ ಭೇಟಿಯಾಗಲು ಬಯಸಿದ್ದೆ. ಆದರೆ, ಬರಬೇಡ ಎಂದಿದ್ದಾರೆ. ಮತ್ತೊಮ್ಮೆ ಸಂಪರ್ಕಿಸುವೆ. ಬರಲು ಹೇಳಿದಲ್ಲಿ ಮಾತ್ರ ಹೋಗುತ್ತೇನೆ. ಅವರಿಗೆ ಟಿಕೆಟ್‌ ನೀಡಿದ್ದರೂ ಪರವಾಗಿಯೇ ಕೆಲಸ ಮಾಡುತ್ತಿದ್ದೆ. ಕೆ.ಎಸ್‌.ಈಶ್ವರಪ್ಪ ನುರಿತ ರಾಜಕಾರಣಿ. ನಾನೂ ಅವರ ಅಭಿಮಾನಿ. ಅವರಿಗೆ ನೋವಾಗಿದೆ ಎಂಬುದನ್ನು ಒಪ್ಪುತ್ತೇವೆ. ಪಕ್ಷಕ್ಕೆ ಬೆನ್ನೆಲುಬಾದ ಅವರೊಂದಿಗೆ ವರಿಷ್ಠರು ಮಾತನಾಡಲಿದ್ದಾರೆ. ಎರಡ್ಮೂರು ದಿನದೊಳಗೆ ಎಲ್ಲವೂ ಬಗೆಹರಿಯಲಿದೆ ಎಂದು ಹೇಳಿದರು.

ಯಾರು ಯಾವ ಪಕ್ಷಕ್ಕೆ ಮುಖ ಮಾಡುತ್ತಾರೆಂಬುದು ಗೌಣ. ಈಗ ವೈಯಕ್ತಿಕ ಹಿತಾಸಕ್ತಿ ಮುಖ್ಯವಲ್ಲ. ಲೋಕಸಭೆಗೂ ವಿಧಾನಸಭೆ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ದೇಶಕ್ಕೆ ಇನ್ನೂ ಮುಂದಿನ 100 ವರ್ಷ ಉತ್ತಮ ಭವಿಷ್ಯವಿದ್ದು, ವಿಕಾಸದತ್ತ ಕೊಂಡೊಯ್ಯಲು, ಮೋದಿ ಪ್ರಧಾನಿಯಾಗಿಸಲು ರಾಜ್ಯದ 28 ಕ್ಷೇತ್ರಗಳಲ್ಲೂ ಜನ ತೀರ್ಮಾನಿಸಿದ್ದಾರೆ. ಬಿಜೆಪಿಗರು ಹಗಲಿರುಳು ಶ್ರಮಿಸಲು ಪಣ ತೊಟ್ಟಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net