ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯನ್ನು ಹೊಡೆದ ಆರೋಪಿ ಪತಿಗೆ ೭ ವರ್ಷ ಶಿಕ್ಷೆ ಮತ್ತು ೪೦ ಸಾವಿರ ರೂ.ಗಳ ದಂಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ವರದಕ್ಷಿಣೆಗಾಗಿ ಗರ್ಭಿಣಿ ಪತ್ನಿಯನ್ನು ಹೊಡೆದ ಪರಿಣಾಮ ಮಗು ಮೃತಪಟ್ಟ ಹಿನ್ನಲೆಯಲ್ಲಿ ಆರೋಪಿ ಪತಿಗೆ ೭ ವರ್ಷ ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡವಿಧಿಸಿ ಇಲ್ಲಿನ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪುನೀಡಿದೆ.

ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೨೦೧೩ ಡಿಸೆಂಬರ್ ೨೮ ರಂದು ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ರಾಜಕೃಷ್ಣಾಪುರ ಗ್ರಾಮದ ವಾಸಿ ಚೌಡಪ್ಪ ಅಲಿಯಾಸ್ ರೆಡ್ಡಿ ಎಂಬಾತ ವರದಕ್ಷಿಣೆ ತರುವಂತೆ ಒತ್ತಾಯಿಸಿ ತನ್ನ ಗರ್ಭಿಣಿ ಪತ್ನಿಯನ್ನು ಹೊಡೆದು ಹಿಂಸಿಸಿದ ಸಂದರ್ಭದಲ್ಲಿ ಆಕೆಯ ಹೊಟ್ಟೆಗೆ ಬಲವಾದ ಏಟುಗಳು ಬಿದ್ದ ಪರಿಣಾಮ ರಕ್ತಸ್ರಾವವಾಗಿ ಗರ್ಭಪಾತವಾದ ಹಿನ್ನಲೆಯಲ್ಲಿ ಮಗು ಮೃತಪಟ್ಟಿತ್ತು.

ಪತ್ನಿಯ ದೂರಿನ ಹಿನ್ನಲೆಯಲ್ಲಿ ಮಾಲೂರು ಪೊಲೀಸರು ಐ.ಪಿ.ಸಿ. ೪೯೮ಎ, ೩೦೭, ೩೨೩, ೩೧೬, ೫೦೪ ಸೆಕ್ಷನ್ ಅನ್ವಯ ದೂರು ದಾಖಲಿಸಿಕೊಂಡು ಆರೋಪಿ ಚೌಡಪ್ಪನನ್ನು ಜೈಲಿಗೆ ಕಳುಹಿಸಿದ್ದರು.

ಈ ಬಗ್ಗೆ ನ್ಯಾಯಾಲಯದಲ್ಲಿ ಸುಧೀರ್ಘ ವಾದ ವಿವಾದ ಹಾಗೂ ೧೧ ಸಾಕ್ಷಿಗಳ ವಿಚಾರಣೆ ನಡೆದು ಆರೋಪಿ ಚೌಡಪ್ಪ ಮೇಲೆ ಆರೋಪ ಸಾಬೀತಾದ ಹಿನ್ನಲೆಯಲ್ಲಿ ೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶರಾದ ಪಿ.ಕೆ.ದಿವ್ಯ ಡಿಸೆಂಬರ್ ೨೮ ಆರೋಪಿಗೆ ೭ ವರ್ಷ ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡವಿಧಿಸಿ ತೀರ್ಪು ನೀಡಿದ್ದಾರೆ.

ಸಂತ್ರಸ್ತೆ ಗರ್ಭಿಣಿ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿಲಕ್ಷಿö್ಮ ಅವರು ವಾದ ಮಂಡಿಸಿದ್ದು, ಅಂದಿನ ವೃತ್ತ ನಿರೀಕ್ಷಕ ಮಾರ್ಕೊಂಡಯ್ಯ ಅವರು ತನಿಖಾ ಅಧಿಕಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net