ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

Published on

ಸಾಲಿಗ್ರಾಮ: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿಯಾಗಿದ್ದು, ಕುಡಿದ ಅಮಲಿನಲ್ಲಿ ಪತಿಯೇ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾನೆ.


ಪಟ್ಟಣದ ರಾಮನಾಥಪುರ ರಸ್ತೆಯ 12 ವಾರ್ಡ್ ನಿವಾಸಿ ಹರೀಶ್ ಎಂಬಾತನ ಪತ್ನಿ ರಾಜೇಶ್ವರಿ ಹತ್ಯೆಯಾದವರು. ಘಟನೆ ವೇಳೆ ಆರೋಪಿ ಗಾಯಗೊಂಡಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಘಟನೆ ಏನು?:
ಸಾಲಿಗ್ರಾಮ ಸಮೀಪದ ಅಂಕನಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರ 3ನೇ ಪುತ್ರಿ ರಾಜೇಶ್ವರಿ ಮತ್ತು ಸಾಲಿಗ್ರಾಮದ ಶಿವಣ್ಣ ಎಂಬುವರ ಪುತ್ರ ಹರೀಶ್ ಅವರ ವಿವಾಹ ಆರೂವರೆ ವರ್ಷದ ಹಿಂದೆ ನಡೆದಿತ್ತು. ಮದುವೆ ಸಂದರ್ಭ 100 ಗ್ರಾಂ ಚಿನ್ನ, ಬೈಕ್, 2 ಲಕ್ಷ ರೂ. ನಗದು ಕೊಟ್ಟು ಕಲ್ಯಾಣ ಮಂಟಪದಲ್ಲಿ ಜೋರಾಗಿಯೇ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ 5 ವರ್ಷದ ಗಂಡು ಮಗುವಿದೆ.


ಸೋಮವಾರ ತಡರಾತ್ರಿ ಹರೀಶ್ ಪಾಮನತ್ತನಾಗಿ ಬಂದು ಪತ್ನಿಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕೊಡುವಂತೆ ಒತ್ತಾಯಿಸಿದ್ದಾನೆ. ಆಕೆ ಕೊಡಲು ನಿರಾಕರಿಸಿದ್ದಾಳೆ. ಆ ವೇಳೆ ಪತ್ನಿಗೆ ಥಳಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಜ್ವಾಲೆ ತಾಳಲಾರದೆ ಗಂಡನನ್ನು ಅಪ್ಪಿಕೊಂಡಿದ್ದಾಳೆ. ಆಗ ಆತನ ಕೈ ಕಾಲುಗಳಿಗೂ ಸುಟ್ಟ ಗಾಯಗಳಾಗಿವೆ. ಆಕೆಯ ಚೀರಾಟ ಕೇಳಿದ ಅಕ್ಕಪಕ್ಕದವರು ಅದೇ ಗ್ರಾಮದಲ್ಲಿರುವ ರಾಜೇಶ್ವರಿ ಸಹೋದರಿ ಅಶ್ವಿನಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಹೋದರಿ ಆಕೆಯನ್ನು ತಕ್ಷಣ ಮೈಸೂರಿನ ಕೆ.ಆರ್.ಆಸ್ಪತ್ರಗೆ ಕರೆದೊಯ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ರಾಜೇಶ್ವರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಳಿಯ ಹರೀಶ್ ಹಾಗೂ ಆತನ ತಾಯಿ ಚಂದ್ರಕಲಾ ನನ್ನ ಮಗಳಿಗೆ ವರದಕ್ಷಿಣೆ ತರುವಂತೆ ಆಗಾಗ್ಗೆ ಹಿಂಸೆ ಕೊಡುತ್ತಿದ್ದರು. ಈ ಸಂಬಂಧ ಮೂರ‌್ನಾಲ್ಕು ಬಾರಿ ರಾಜಿ ಪಂಚಾಯಿತಿ ಮಾಡಿದ್ದೆವು. 2018ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಈಗ ಮೊದಲೇ ಪ್ಲಾನ್ ಮಾಡಿ ನನ್ನ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜೇಶ್ವರಿ ತಂದೆ ಸೋಮಶೇಖರ್ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಸೆಕ್ಷನ್ 498 (ಎ), 302ರ ಅಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಶ್ರೀಕಾಂತ್, ಎಸ್‌ಐ ಕುಮುದಾ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net