

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಗದ್ದಿಗೆ ಮುಖ್ಯರಸ್ತೆ ವಡ್ಡರಗುಡಿ ಸೇತುವೆ ಹಾಗೂ ಬೆಳಗನಹಳ್ಳಿ ಮುಖ್ಯರಸ್ತೆಯ ತೊರವಳ್ಳಿ ಸೇತುವೆ ಮುಳುಗಡೆಯಾಗಿ ಸಾರ್ವಜನಿಕರ ಸಂಚಾರಕ್ಕೆ ತಡೆ ಉಂಟಾಗಿ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕವಿಲ್ಲದೆ ಪರದಾಡುವ ಸ್ಥಿತಿ ಸೋಮವಾರ ನಿರ್ಮಾಣವಾಯಿತು.
ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿ ನೀರು ಹರಿಯುತ್ತಿದೆ. ಸಣ್ಣಪುಟ್ಟ ಕೆರೆಗಳಿಂದ ಹರಿಯುವ ನೀರು ಹೆಬ್ಬಾಳ ಜಲಾಶಯಕ್ಕೆ ಹರಿದುಬಂದು ಸೇರುತ್ತಿದೆ. ಇದರಿಂದಾಗಿ ಜಲಾಶಯದ ಹೊರ ಹರಿವಿನ ಪ್ರಮಾಣ ದಿಢೀರ್ ಹೆಚ್ಚಾಗಿದ್ದು ಸಾವಿರಾರು ಜನರ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಹೆಬ್ಬಾಳ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ತಾಲೂಕಿನ ಬೆಳಗನಹಳ್ಳಿ, ತೊರವಳ್ಳಿ ಸಂಪರ್ಕಿಸುವ ಸೇತುವೆ ಮುಳುಗಡೆಯಾಗುತ್ತದೆ. ಜನರ ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಸಂಚರಿಸಲು ಪರದಾಡುವಂವಾಯಿತು. ಈ ಎರಡೂ ಸೇತುವೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕಿದೆ. ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಾದರೆ ಸಾರ್ವಜನಿಕರ ಸಂಚಾರಕ್ಕೆ ದಿಢೀರ್ ತಡೆ ಬಿದ್ದುಬಿಡುತ್ತದೆ. ಇದರಿಂದಾಗಿ ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ತುರ್ತು ಸೇವೆಗಳಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.
ತಾಲೂಕಿನ ವಡ್ಡರಗುಡಿ ಹಾಗೂ ಬೆಳಗನಹಳ್ಳಿ ಸಂಪರ್ಕಿಸುವ ಎರಡು ಸೇತುವೆಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು ಎಂಬುದು ಬಹುದಿನಗಳ ಸಾರ್ವಜನಿಕರ ಬೇಡಿಕೆಯಾಗಿದೆ. ಇದನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಗಣಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತೀರಾ ಹಳೆಯದಾದ ವಡ್ಡರಗುಡಿ ಹಾಗೂ ತೊರವಳ್ಳಿ ಸೇತುವೆಯನ್ನು ಹೊಸದಾಗಿ ನಿರ್ಮಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಈ ಸೇತುವೆ ನಿರ್ಮಾಣಕ್ಕೆ ಮುಂದಾಗಿಲ್ಲ. ಸೇತುವೆಯಿಂದ ಮುಂದೊಂದು ದಿನ ತೀವ್ರ ಅಪಾಯವಾಗುವ ಸಂಭವವಿದೆ. ಸೇತುವೆಯು ಸಂಪೂರ್ಣ ಶಿಥಿಲಗೊಂಡಿರುವುದರಿಂದ ಹೊಸದಾಗಿ ನಿರ್ಮಿಸಿ ಮುಂದೊಂದು ದಿನ ಸಂಭವಿಸಬಹುದಾದ ಸಾವು-ನೋವನ್ನು ತಪ್ಪಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.