‘ವಜ್ರಮುಷ್ಟಿ’ಗೆ ಜೋಡಿಗಳು ಫೈನಲ್

vajramushti
Published on

ಅವಿನಾಶ್ ಜೈನಹಳ್ಳಿ ಮೈಸೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ನೋಡುಗರ ಮೈನವಿರೇಳಿಸುವ ‘ವಜ್ರಮುಷ್ಟಿ ಕಾಳಗ’ಕ್ಕೆ ಅಖಾಡ ಸಿದ್ಧಗೊಂಡಿದ್ದು, ದೇವಮಲ್ಲ ಜಟ್ಟಿಗಳ ಸಾಂಪ್ರದಾಯಿಕ ಕಾಳಗ ವಿಜಯದಶಮಿ ದಿನದಂದು ನಡೆಯಲಿದೆ. ಈ ಸಂಬಂಧ ಸೋಮವಾರ ಅರಮನೆ ಅಂಗಳದಲ್ಲಿ ಜೋಡಿ ಕಟ್ಟಲಾಗಿದೆ.

ವಜ್ರಮುಷ್ಟಿ ಕಾಳಗ ನಡೆಸಲು ಈ ಬಾರಿಯೂ ಎರಡು ಜೊತೆ ಜಟ್ಟಿಗಳನ್ನು ಜತೆ ಮಾಡಲಾಗಿದೆ. ಮೈಸೂರಿನ ಸೋಮಶೇಖರ ಜಟ್ಟಿ ಅವರ ಪುತ್ರ ಮಂಜುನಾಥ ಜಟ್ಟಿ ಮತ್ತು ಬೆಂಗಳೂರಿನ ನಾರಾಯಣ ಜಟ್ಟಿ ಪುತ್ರ ಪ್ರದ್ಯುಮ್ನ ಜಟ್ಟಿ ಅವರನ್ನು ಜೋಡಿ ಕಟ್ಟಲಾಗಿದೆ.

ಮತ್ತೊಂದು ಕಾಳಗಕ್ಕೆ ಎರಡನೇ ಜೋಡಿಯಾಗಿ ಚನ್ನಪಟ್ಟಣದ ಜಗ್ಗ ಜಟ್ಟಿ ಪುತ್ರ ರಾಘವೇಂದ್ರ ಜಟ್ಟಿ ಮತ್ತು ಚಾಮರಾಜನಗರದ ನಾರಾಯಣ ಜಟ್ಟಿ ಪುತ್ರ ಮಹೇಶ್ ಜಟ್ಟಿ ಅವರನ್ನು ಜೋಡಿ ಮಾಡಲಾಗಿದೆ. ಜೋಡಿ ಮಾಡಿರುವ ಜಟ್ಟಿಗಳು ಉಸ್ತಾದ್‌ಗಳ ಬಳಿ ಈಗಾಗಲೇ ಒಂದು ತಿಂಗಳಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದ್ದಾರೆ. ನಾಲ್ಕು ಜಟ್ಟಿಗಳನ್ನು ಎತ್ತರ ಮತ್ತು ತೂಕದ ಆಧಾರದ ಮೇಲೆ ದೈಹಿಕವಾಗಿ ಸರಿಹೊಂದುವ ಎರಡು ಜೋಡಿಯನ್ನು ಜತೆ ಮಾಡಲಾಗಿದೆ. ವಿಶೇಷವಾಗಿ ಬೆಂಗಳೂರು, ಮೈಸೂರು, ಚನ್ನಪಟ್ಟಣ ಹಾಗೂ ಚಾಮರಾಜನಗರದ ಒಬ್ಬೊಬ್ಬ ಜಟ್ಟಿಗೆ ಅವಕಾಶ ನೀಡಲಾಗಿದೆ.

2 ರಂದು ನಡೆಯಲಿದೆ ಕಾಳಗ: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಅ.2ರಂದು ಬೆಳಗ್ಗೆ 9 ರಿಂದ 12 ಗಂಟೆ ಒಳಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ನಡೆಯುವ ಕಾಳಗ ನೋಡುಗರ ಮೈನವಿರೇಳಿಸಲಿದೆ. ಈ ಎರಡು ಜೋಡಿ ‘ವಜ್ರನಖ’ ಎಂಬ ಹರಿತವಾದ ಆಯುಧ ಧರಿಸಿ ಕಾದಾಡಲಿದ್ದಾರೆ. ಕೇಶಮುಂಡನ ಮಾಡಿಸಿಕೊಂಡು, ಮೈ ತುಂಬಾ ಕೆಂಪು ಮಣ್ಣು ಬಳಿದುಕೊಂಡು ಅಖಾಡದಲ್ಲಿ ರಕ್ತ ಚಿಮ್ಮಿಸಲಿದ್ದಾರೆ. ಇದಕ್ಕೂ ಮೊದಲು ಜಟ್ಟಿಗಳ ಕುಲದೇವತೆ ನಿಂಬುಜಾಂಬೆಗೆ ಈ ನಾಲ್ಕು ಜಟ್ಟಿಗಳು ಪೂಜೆ ಸಲ್ಲಿಸಲಿದ್ದಾರೆ ಎಂದು ಎಸ್.ನಾಗರಾಜ ಜಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಜ್ರಮುಷ್ಟಿ ಕಾಳಗದ ದಶವಂದಿಗಳಾಗಿ ಮೈಸೂರಿನ ನಾಗರಾಜ ಜಟ್ಟಪ್ಪ, ಟೈಗರ್ ಬಾಲಾಜಿ ಜಟ್ಟಿ, ಶ್ರೀರಂಗಪಟ್ಟಣದ ಉಸ್ತಾದ್ ಮಾಧವ ಜಟ್ಟಿ, ಮೈಸೂರಿನ ಉಸ್ತಾದ್ ಸಿ.ಎನ್.ಬಾಲಾಜಿ ಜಟ್ಟಿ, ಬೆಂಗಳೂರಿನ ಉಸ್ತಾದ್ ಪಿ.ಕೃಷ್ಣ ಜಟ್ಟಿ, ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಹಾಗೂ ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಕಾರ್ಯನಿರ್ವಹಿಸಲಿದ್ದಾರೆ.

ರಾಜವಂಶಸ್ಥರ ಭೇಟಿ: ಜಟ್ಟಿ ಕಾಳಗದ ಉಸ್ತಾದ್‌ಗಳು ಹಾಗೂ ಜೋಡಿ ಕಟ್ಟಲಾಗಿರುವ ಜಟ್ಟಿಗಳು ಸೆ.30 ಅಥವಾ ಅ.1 ರಂದು ಅರಮನೆಯಲ್ಲಿ ರಾಜವಂಶಸ್ಥರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಉಸ್ತಾದ್‌ಗಳು ಈ ಬಾರಿ ‘ವಜ್ರಮುಷ್ಟಿ ಕಾಳಗ’ ನಡೆಸುವ ಜಟ್ಟಿಗಳನ್ನು ರಾಜವಂಶಸ್ಥರಿಗೆ ಪರಿಚಯ ಮಾಡಿಸಲಿದ್ದಾರೆ.

ಸಾವಿರಾರು ವರ್ಷಗಳ ಇತಿಹಾಸ: ಪ್ರಾಚೀನ ಸಮರ ಕಲೆಗಳಲ್ಲಿ ಒಂದಾದ ವಜ್ರಮುಷ್ಟಿ ಕಾಳಗಕ್ಕೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ. ಗುಜರಾತ್‌ನ ಪಠಾಣ್ ಜಿಲ್ಲೆ ಇದರ ತವರು. ಈ ಸಮರ ಕಲೆಯನ್ನು ಶ್ರೀಕೃಷ್ಣ-ಬಲರಾಮರು ಜಟ್ಟಿ ಸಮುದಾಯಕ್ಕೆ ಧಾರೆ ಎರೆದು ಕೊಟ್ಟರೆಂದು ಮಲ್ಲ ಪುರಾಣದಲ್ಲಿ ಉಲ್ಲೇಖ ಇದೆ. ಹಿಂದೆ ಮೈಸೂರಿನ ರಾಜರು ದಸರಾ ಮಹೋತ್ಸವಕ್ಕೆ ಸಾಮಂತ ರಾಜರು, ಸ್ನೇಹಿತರು, ಆಪ್ತರನ್ನು ಆಹ್ವಾನಿಸಿ ವಜ್ರಮುಷ್ಟಿ ಕಾಳಗ ಏರ್ಪಡಿಸುತ್ತಿದ್ದರು. ಸೈನಿಕರು ರಾಜನಿಗಾಗಿ ಪ್ರಾಣವನ್ನಾದರೂ ಅರ್ಪಿಸಲು ಸಿದ್ಧ ಎಂಬುದನ್ನು ಪರೋಕ್ಷವಾಗಿ ತಿಳಿಸುವುದು ಹಾಗೂ ಸೈನಿಕರ ರಾಜನಿಷ್ಠೆ ಎಷ್ಟಿದೆ ಎಂಬುದನ್ನು ತೋರ್ಪಡಿಸುವುದು ಇದರ ಉದ್ದೇಶವಾಗಿತ್ತು.

ಸಂಪ್ರದಾಯದಂತೆ ಅಂಬಾವಿಲಾಸ ಅರಮನೆ ಅಂಗಳದಲ್ಲಿ ಅ.2ರಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬನ್ನಿಮರಕ್ಕೆ ಪೂಜೆ ಸಲ್ಲಿಸುವ ಮುನ್ನ ವಜ್ರಮುಷ್ಟಿ ಕಾಳಗ ನಡೆಯಲಿದೆ. ಎರಡು ಜೊತೆ ಜಟ್ಟಿಗಳನ್ನು ಜತೆ ಮಾಡಲಾಗಿದೆ. ಮೈಸೂರಿನ ಸೋಮಶೇಖರ ಜಟ್ಟಿ ಅವರ ಪುತ್ರ ಮಂಜುನಾಥ ಜಟ್ಟಿ ಮತ್ತು ಬೆಂಗಳೂರಿನ ನಾರಾಯಣ ಜಟ್ಟಿ ಪುತ್ರ ಪ್ರದ್ಯುಮ್ನ ಜಟ್ಟಿ ಅವರನ್ನು ಜೋಡಿ ಕಟ್ಟಲಾಗಿದೆ. ಎರಡನೇ ಜೋಡಿಯಾಗಿ ಚನ್ನಪಟ್ಟಣದ ಜಗ್ಗ ಜಟ್ಟಿ ಪುತ್ರ ರಾಘವೇಂದ್ರ ಜಟ್ಟಿ ಮತ್ತು ಚಾಮರಾಜನಗರದ ನಾರಾಯಣ ಜಟ್ಟಿ ಪುತ್ರ ಮಹೇಶ್ ಜಟ್ಟಿ ಅವರನ್ನು ಜೋಡಿ ಮಾಡಲಾಗಿದೆ. ಎಸ್.ನಾಗರಾಜ ಜಟ್ಟಪ್ಪ ಮೈಸೂರಿನ ದಶವಂದಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net