

ಎಚ್.ಡಿ.ಕೋಟೆ: ವಚನ ಸಾಹಿತ್ಯದಿಂದ ಜ್ಞಾನವೃದ್ಧಿಯ ಜತೆಗೆ ಮನಸ್ಸಿಗೂ ಸಮಾಧಾನ ದೊರೆಯುತ್ತದೆ ಎಂದು ಶರಣು ವಿಶ್ವ ವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ವೀರಯೋಧ ಮಹೇಶ್ ಅವರ ದತ್ತಿ ಸ್ಮರಣಾರ್ಥ ಆಯೋಜಿಸಿದ್ದ 57ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನ ಜಗತ್ತಿನ ಇತಿಹಾಸದಲ್ಲಿ ಸುವರ್ಣ ಯುಗವಾಗಿತ್ತು. ಶತಮಾನಗಳಿಂದ ಶೋಷಣೆ ಒಳಗಾದವರಿಗೆ ಬಸವಣ್ಣ ಸ್ವಾತಂತ್ರೃ ನೀಡಿದರು. ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಮೊದಲ ಬಾರಿ ಚಳವಳಿ ರೂಪಿಸಿದರು. ಮೌಢ್ಯತೆ ವಿರೋಧಿಸುವ ಜತೆಗೆ ಸಮಾನತೆಗೆ ಒತ್ತು ನೀಡಿದರು. ವಚನ ಸಾಹಿತ್ಯವನ್ನು ಕೇವಲ ಅಧ್ಯಯನ ದೃಷ್ಟಿಯಿಂದ ಕಲಿಯದೆ ಅನ್ವಯದ ದೃಷ್ಟಿಯಿಂದ ಕಲಿತಾಗ ಬಾಳು ಬೆಳಕಾಗುತ್ತದೆ ಎಂದರು.
ತಾಲೂಕು ಬಸವ ಬಳಗದ ಅಧ್ಯಕ್ಷ ಕೆಂಡಗಣ್ಣಸ್ವಾಮಿ ಮಾತನಾಡಿ, ವಚನ ಸಾಹಿತ್ಯ ವಿಶ್ವಮಟ್ಟದಲ್ಲಿ ಪ್ರಸಾರವಾಗಲು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ ಪ್ರತಿನಿತ್ಯ ವಿವಿಧ ಚಟುವಟಿಕೆಗಳನ್ನು ಮಾಡುವ ಮೂಲಕ ಕಾರ್ಯೋನ್ಮುಖವಾಗಿದೆ. ವಿದೇಶಿಗರೂ ಕೂಡ ವಚನವನ್ನು ಕಲಿತು ಗಾಯನ ಮಾಡಲು ಪ್ರೇರಣೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಅಗತ್ಯಗಳಾದ ಸಮವಸ್ತ್ರ ನೀಡುವುದರ ಜತೆಗೆ ಅವರಿಗೆ ಜ್ಞಾನದ ಅರಿವನ್ನು ನೀಡುತ್ತಿದೆ. ಜತೆಗೆ ಗ್ರಾಮಗಳಲ್ಲಿ, ಮನೆಗಳಲ್ಲಿ ವಚನ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದರಿಂದ ಎಲ್ಲರೂ ಸಹಬಾಳ್ವೆ ನಡೆಸಲು ಸಹಕಾರಿಯಾಗುತ್ತಿದೆ ಎಂದು ತಿಳಿಸಿದರು.
ವಚನ ವಾಚನ ಮಾಡಿದ 30 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಶಂಸನಾ ಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಕೆ.ಶಿವರಾಜು, ಸಮಾಜ ಸೇವಕಿ ಸರ್ವಮಂಗಳಾ ನಾಗರಾಜು, ಕೋಟೆ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಕೆ.ಎಂ.ಮಹೇಶ್, ಮುಖ್ಯಶಿಕ್ಷಕಿ ಜ್ಯೋತಿ, ಶಿಕ್ಷಕರಾದ ಅಂಬುಜಾ, ವೇದಾವತಿ, ದಿನೇಶ್, ಮುಖಂಡರಾದ ಮಹದೇವಪ್ಪ, ಜಯಶಂಕರ್, ಗ್ರಾಪಂ ಸದಸ್ಯ ವೃಷಭೇಂದ್ರ ಇದ್ದರು.