ಬೇಲೂರು: 12ನೇ ಶತಮಾನದಲ್ಲಿ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ನಡೆಸಿದ ಕ್ರಾಂತಿಯಿಂದಾಗಿ ಇಂದು ಕನ್ನಡ ಸಾಹಿತ್ಯವು ವಿಶ್ವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಜಯಣ್ಣಗೌಡ ಹೇಳಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ವಿಶ್ವ ಪದವಿ ಪೂರ್ವ ಕಾಲೇಜಿನಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ನೆನಪಿಗಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಚನ ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿ ಇದೆ. ಇಂತಹ ಮಹತ್ವಪೂರ್ಣ ವಚನ ಸಾಹಿತ್ಯಕ್ಕೆ ಶಕ್ತಿ ನೀಡಿದವರು ಡಾ.ಫ.ಗು.ಹಳಕಟ್ಟಿಯವರು. ಇವರು ವಚನವನ್ನು ಸಂಶೋಧಿಸಿ ಪ್ರಕಟಿಸಿದ ನಂತರದಲ್ಲೇ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯ ಮಹತ್ವ ಪಡೆಯಿತು. ವಚನ ಸಾಹಿತ್ಯ ಜಗತ್ತಿನಲ್ಲಿ ವಿಶಿಷ್ಟ ಸಾಹಿತ್ಯವಾಗಿದೆ. ಡಾ.ಫ.ಗು.ಹಳಕಟ್ಟಿಯವರು ಈ ಕ್ಷೇತ್ರದಲ್ಲಿ ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸವನ್ನು ಏಕಾಂಗಿಯಾಗಿ ಮಾಡಿ ತೋರಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ಆಸ್ತಿಯನ್ನೇ ಮಾರಾಟ ಮಾಡಿದ್ದನ್ನು ನೆನಪಿಸಿಕೊಳ್ಳಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಮಹಿಳೆಯರು ಅಡುಗೆ ಮನೆಗೆ ಸೀಮತವಾಗಿದ್ದ ಕಾಲ ಘಟ್ಟದಲ್ಲೇ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸ 12ನೇ ಶತಮಾನದಲ್ಲಿ ನಡೆದಿತ್ತು. ಅಂದೇ ಸ್ತ್ರೀಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ನೀಡಲಾಗಿತ್ತು. ಬಸವಣ್ಣನವರ ಹಾಗೂ ಶರಣರ ವಚನಗಳಲ್ಲಿ ಇಂದಿನ ಸಂವಿಧಾನದ ಆಶೋತ್ತರಗಳನ್ನು ಅಂದೇ ಕಾಣಲು ಸಾಧ್ಯವಾಗಿತ್ತು. ವಚನಗಳ ಮೂಲಕವೇ ಅಂದು ಸಮಾಜದಲ್ಲಿ ದೊಡ್ಡ ಪಿಡುಗಾಗಿದ್ದ ಜಾತಿ ವ್ಯವಸ್ಥೆ ಹೋಗಲಾಡಿಸುವಲ್ಲಿ ಕೈಗೊಂಡ ನಿರ್ಧಾರಗಳು ಇಂದಿಗೂ ಮಾದರಿಯಾಗಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ವಚನ ಸಾಹಿತ್ಯದ ಅಧ್ಯಯನದಿಂದ ಪ್ರತಿಯೊಬ್ಬರಿಗೂ ಅರಿವು ಮೂಡುತ್ತದೆ. ವ್ಯಕ್ತಿ ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರತಿಯೊಬ್ಬರೂ ವಚನ ಸಾಹಿತ್ಯದ ಅಧ್ಯಯನ ಮಾಡಬೇಕೆಂಬ ನಿಟ್ಟಿನಲ್ಲಿ ಸುತ್ತೂರಿನ ಹಿಂದಿನ ಪೂಜ್ಯರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಟ್ಟಿ ವಚನ ಸಾಹಿತ್ಯಕ್ಕೆ ಹೊಸ ಬೆಳಕು ನೀಡಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ.ಎಂ.ನಿಂಗರಾಜ್, ಜಿಲ್ಲಾ ಉಪಾಧ್ಯಕ್ಷ ರಾಜೇಗೌಡ, ಉಪಾಧ್ಯಕ್ಷ ಮಾ.ಶಿವಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ವಿನುತಾ, ಯುವ ಘಟಕದ ಅಧ್ಯಕ್ಷ ಚಂದನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಉಪನ್ಯಾಸಕ ಧನಂಜಯ ಸೇರಿದಂತೆ ಇತರರಿದ್ದರು.