

ಮೈಸೂರು: ರಾಜ್ಯಾದ್ಯಂತ ಹತ್ತಾರು ಜಿಲ್ಲೆಗಳಲ್ಲಿ ಸುಮಾರು ಏಳೆಂಟು ದಶಕಗಳಿಂದ ಜಮೀನಿನ ಖಾತೆ ಕಂದಾಯ ಮಾಡಿಸಿಕೊಂಡು ವ್ಯವಸಾಯ ಮಾಡುತ್ತಿರುವ ರೈತಾಪಿ ವರ್ಗದ ಮೇಲೆ ದಿಢೀರನೆ ವಕ್ಫ್ ಕಾರಣ ಮುಂದಿಟ್ಟುಕೊಂಡು ಒಕ್ಕಲೆಬ್ಬಿಸಲು ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ಅಧ್ಯಕ್ಷ ಡಾ.ಬಿ.ಶಿವಣ್ಣ ಕಿಡಿಕಾರಿದರು.
ಜಿಲ್ಲಾಧಿಕಾರಿಗಳು ಹಾಗೂ ರೆವಿನ್ಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತಲೆ ತಲಾಂತರದಿಂದ ವ್ಯವಸಾಯ ಮಾಡಿಕೊಂಡು ಖಾತೆದಾರರಾಗಿರುವ ರೈತರ ಹೆಸರನ್ನು ಕೈಬಿಟ್ಟು ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸುವಂತೆ ಸೂಚಿಸಿದ ಆದೇಶ ಖಂಡನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವಿಚಾರವಾಗಿ ರೈತರು ಪ್ರತಿಭಟಿಸಲು ಮುಂದಾದಾಗ ಸಿಎಂ ಮೌಖಿಕ ಆದೇಶ ನೀಡಿ, ಒಕ್ಕಲೆಬ್ಬಿಸದಂತೆ ನಿರ್ದೇಶನ ನೀಡಿರುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಹೀಗಾಗಿ ವಿಶೇಷ ಸಂಪುಟ ಸಭೆ ಕರೆದು ರಾಜ್ಯ ಗೆಜೆಟ್ ಮೂಲಕ ಈ ಕುರಿತ ಅಧಿಸೂಚನೆ ಹೊರಡಿಸಬೇಕು. ಇದಲ್ಲದಿದ್ದರೆ ರೈತರಿಗೆ ಎದುರಾಗಿರುವ ಸಮಸ್ಯೆ ತಪ್ಪುವುದಿಲ್ಲ ಎಂದರು.
ಪದಾಧಿಕಾರಿಗಳಾದ ಶ್ರೀನಿವಾಸ್, ಪ್ರವೀಣ್‌ಕುಮಾರ್, ಆರ್.ಡಿ.ಕುಮಾರ್, ಭಾಗ್ಯಮ್ಮ ಹಾಗೂ ಕುಮಾರಸ್ವಾಮಿ ಇದ್ದರು.